ಚೆಂಬು : ಆನೆ ದಾಳಿಗೆ ವ್ಯಕ್ತಿ ಬಲಿ
ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
Update: 2025-08-07 11:35 IST
ಸುಳ್ಯ: ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ ( 72) ಮೃತ ದುರ್ದೈವಿ. ಅವರು ಆ.06 ರಂದು ರಾತ್ರಿ 10.30 ರ ಸಮಯಕ್ಕೆ ಮನೆಯ ಹತ್ತಿರ ನಾಯಿ ಬೊಗಳುತ್ತಿದೆ ಎಂದು ತೋಟದ ಕಡೆ ಹೋದಾಗ ಆನೆ ತುಳಿದಿದೆ. ಅವರನ್ನು ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತ ಪಟ್ಟಿದ್ದಾರೆನ್ನಲಾಗಿದೆ. ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.
ಮೃತರು ಪತ್ನಿ, ಮಕ್ಕಳಾದ ವಿನಯ, ಚಿತ್ರಾ, ನಯನ, ಸುಮಾ, ಶೋಭ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನಿರಂತರ ಆನೆ ದಾಳಿಯಿಂದ ಕಂಗಾಲಾಗಿದ್ದ ಕೃಷಿಕರಿಗೆ ರೈತನ ಸಾವು ಅರಣ್ಯ ಇಲಾಖೆಯ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ. ಆನೆ ದಾಳಿ ಮಾಡುತ್ತಿರುವ ಬಗ್ಗೆ ಹಾಗೂ ಆನೆ ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆ ಭಾಗದ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.