×
Ad

ಧರ್ಮಸ್ಥಳ| ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂದ ಸಾಕ್ಷಿ ದೂರುದಾರ

Update: 2025-07-16 18:34 IST

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ನ್ಯಾಯಾಲಯ ದಲ್ಲಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ಬುಧವಾರ ತಾನು ಹೂತು ಹಾಕಿದ್ದ ಮೃತದೇಹಗಳ ಬಗ್ಗೆ ಮಾಹಿತಿ ನೀಡಲು ತನ್ನ ವಕೀಲರೊಂದಿಗೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂದಿರುವುದಾಗಿ ತಿಳಿದುಬಂದಿದೆ.

ಬುಧವಾರ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಬಂದ ಇವರು ನಾಲ್ಕು ಗಂಟೆಯ ಸುಮಾರಿಗೆ ಹಿಂತಿರುಗಿದ್ದಾರೆ. ಕಾರಿನಲ್ಲಿದ್ದ ವಕೀಲರು, ಸಾಕ್ಷಿ ದೂರುದಾರ ಕಾರಿನಿಂದ ಇಳಿಯದೆ ಮುಚ್ಚಿದ್ದ ವಾಹನದಲ್ಲಿಯೇ ಸುಮಾರು ಒಂದು ಗಂಟೆಯ ಸಮಯ ಕಳೆದರು ಎಂದು ತಿಳಿದುಬಂದಿದೆ.

ಸಾಕ್ಷಿ ದೂರುದಾರ ಹಾಗೂ ವಕೀಲರು ಒಂದು ಗಂಟೆಯ ಕಾಲ ಸದ್ರಿ ಸ್ಥಳದಲ್ಲಿ ಇದ್ದರೂ ಯಾವುದೇ ಪೊಲೀಸ್ ಅಧಿಕಾರಿಗಳು ಈ ಸ್ಥಳಕ್ಕೆ ಬರಲಿಲ್ಲ. ಪ್ರಕರಣದ ತನಿಖೆಯ ಜವಾಬ್ದಾರಿ ಇರುವ ಬೆಳ್ತಂಗಡಿ ಗ್ರಾಮೀಣ ವೃತ್ತ ನಿರೀಕ್ಷಕರು ಹಾಗೂ ಪಿ.ಎಸ್.ಐ ಅವರು ಧರ್ಮಸ್ಥಳ ಠಾಣೆಯಲ್ಲಿ ಬೆಳಗ್ಗಿನಿಂದಲೂ ಇದ್ದು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು.

ನೇತ್ರಾವತಿ ಸ್ನಾನಘಟ್ಟದವರೆಗೆ ಬಂದ ಸಾಕ್ಷಿ ದೂರುದಾರ ಮತ್ತು ವಕೀಲರ ತಂಡ ಧರ್ಮಸ್ಥಳ ಠಾಣೆಗೆ ಭೇಟಿ ನೀಡಲಿಲ್ಲ ಎಂದು ತಿಳಿದುಬಂದಿದೆ.

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತು ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸಾಕ್ಷಿ ದೂರುದಾರ ಜು.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದು, ಅಲ್ಲದೆ ತಾನು ಹೂತು ಹಾಕಿದ್ದ ಮೃತದೇಹವೊಂದನ್ನು ಹೊರತೆಗೆದಿರುವುದಾಗಿ ಹೇಳಿದ್ದು ಅದರ ಕಳೇಬರವನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.

ಎಸ್.ಪಿ‌ ಸ್ಪಷ್ಟನೆ

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಧ್ಯಾಹ್ನದ ವೇಳೆ ಸ್ಪಷ್ಟನೆ ನೀಡಿದ್ದು, ಹೂತು ಹಾಕಿರುವ ಹೆಣಗಳನ್ನು ತೆಗೆಯುವ ಬಗ್ಗೆ ಜು.16ರಂದು ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕ್ರಿಯೆಗಳು ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News