ಶತಾಯುಷಿ ಡಾ. ರಾಮಚಂದ್ರ ಭಟ್ ನಿಧನ
ಉಪ್ಪಿನಂಗಡಿ: ಇಲ್ಲಿನ ಹಿರಿಯ ವೈದ್ಯ, ಕೆಲ ದಿನಗಳ ಹಿಂದೆಯಷ್ಟೇ 100 ನೇ ವರ್ಷಕ್ಕೆ ಕಾಲಿರಿಸಿದ್ದ ಶತಾಯುಷಿ ಡಾ. ಮುದ್ರಾಜೆ ರಾಮಚಂದ್ರ ಭಟ್ (100) ಹೃದಯಾಘಾತದಿಂದ ಸೋಮವಾರ ರಾತ್ರಿ ನೆಕ್ಕಿಲಾಡಿಯ ಅವರ ಸ್ವಗೃಹದಲ್ಲಿ ನಿಧನರಾದರು.
1952ನೇ ಇಸವಿಯಿಂದ ಉಪ್ಪಿನಂಗಡಿ ಪರಿಸರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸತೊಡಗಿದ್ದ ಅವರು, ಅಂದಿನ ಸರಕಾರಿ ನಿಯಮಾವಳಿಯಂತೆ ಇಳಂತಿಲ, ನೆಲ್ಯಾಡಿ, ಇಚ್ಲಂಪಾಡಿ, ಶಿರಾಡಿ ಪರಿಸರಕ್ಕೆ ವಾರದ ನಿರ್ದಿಷ್ಟ ದಿನಗಳಲ್ಲಿ ಸೈಕಲ್‍ನಲ್ಲಿ ಭೇಟಿ ನೀಡಿ ಅಲ್ಲಿನ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಮೊದಲ ಮಹಡಿಯ ಕಟ್ಟಡದಲ್ಲಿ ಕ್ಲಿನಿಕ್ ತೆರೆದು ಸೇವೆ ಸಲ್ಲಿಸುತ್ತಿದ್ದ ಕಾರಣಕ್ಕೆ ಇವರು `ಮಾಳಿಗೆ ಡಾಕ್ಟರ್' ಎಂದೇ ಕರೆಸಿಕೊಳ್ಳುತ್ತಿದ್ದರು. ಅಲ್ಲದೇ, ಅವರು ಬಡವರಿಗೆ ಉಚಿತ ಔಷಧೋಪಚಾರ ನೀಡಿ ಜನಮನ್ನಣೆ ಗಳಿಸಿದ್ದರು.
ಕಾಂಚನ ಶೀ ಲಕ್ಷ್ಮೀ ನಾರಾಯಣ ಸಂಗೀತ ಶಾಲೆಯ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಶ್ರಮಿಸಿದ್ದ ಅವರು, ಹಲವಾರು ಸಂಘ ಸಂಸ್ಥೆಗಳಿಗೆ ಸಹಕಾರ ನೀಡುತ್ತಿದ್ದರು.
ಮೃತರು ಪತ್ನಿ, ಖ್ಯಾತ ಮಕ್ಕಳ ತಜ್ಞ ಡಾ. ಎಂ.ಎನ್. ಭಟ್ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.