×
Ad

ಅಬ್ಬಕ್ಕನ ಶೌರ್ಯ, ಸಾಹಸಗಾಥೆ ಪಠ್ಯವಾಗಲಿ : ಎಸ್.ಎಲ್.ಭೋಜೇಗೌಡ

Update: 2025-11-11 09:56 IST

ಮಂಗಳೂರು : ಕರಾವಳಿಯ ಸ್ವಾತಂತ್ರ್ಯ ಹೋರಾಟದ ಪ್ರಥಮ ಕಿಡಿ ರಾಣಿ ಅಬ್ಬಕ್ಕಳ ಶೌರ್ಯ, ಪೋರ್ಚುಗೀಸರ ವಿರುದ್ಧ ನಡೆಸಿದ ದಿಟ್ಟ ಹೋರಾಟದ ಸಾಹಸಗಾಥೆಯು ಶೈಕ್ಷಣಿಕ ಪಠ್ಯದಲ್ಲಿ ದಾಖಲಾಗಿ ಯುವಜನತೆಯನ್ನು ತಲುಪಲಿ ಎಂದು ವಿಧಾನ ಪರಿಷತ್ತಿನ ಸದಸ್ಯರು ಮತ್ತು ಶಾಸಕರಾದ ಎಸ್.ಎಲ್.ಭೋಜೇಗೌಡ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ವಿಭಾಗ, ಬೆಸೆಂಟ್ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ಅಬ್ಬಕ್ಕ @ 500, ಪ್ರೇರಣದಾಯಿ 100 ಉಪನ್ಯಾಸಗಳ ಸರಣಿಯ 84ನೇ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣಗೈದರು.

ನಾಡಿನ ಕನ್ನಡ ಸಾಹಿತಿಗಳ ವಿವಿಧ ರಚನೆಗಳನ್ನು ಉಲ್ಲೇಖಿಸಿ ನಮ್ಮ ಹಿರಿಯರ ಆಲೋಚನಾ ಕ್ರಮ, ಜೀವನ ಕ್ರಮ ನಮಗೆ ಮಾದರಿಯಾಗಬೇಕು. ಅಬ್ಬಕ್ಕನಂತಹ ಸ್ವಾಭಿಮಾನಿ ಮಹಿಳೆಯ ಬದುಕು ಇಂದಿನ ಹೆಣ್ಮಕ್ಕಳಿಗೆ ಮಾದರಿಯಾಗಬೇಕು. ನಮ್ಮ ದೇಶದ ಸಂವಿಧಾನ ಮತ್ತು ನಾಡಗೀತೆಯ ಆಶಯವನ್ನು ಅವರು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಭಾವೈಕ್ಯತೆಯ ಮಹತ್ವವನ್ನು ಜಗತ್ತಿಗೆ ಸಾರಿದ ದೇಶ ನಮ್ಮದು ಎಂದು ಹೇಳಿದರು.

ಇಂದಿನ ಯುವ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣದ ಜೊತೆಗೆ ನಾಡಿನ ವಿಶೇಷತೆಯನ್ನು ಪರಿಚಯಿಸುವ ಕೆಲಸ ಶಿಕ್ಷಣ ಕ್ಷೇತ್ರದಿಂದ ನಡೆಯಬೇಕು. ಆ ಮೂಲಕ ಅಬ್ಬಕ್ಕನಂತಹ ನೂರಾರು ವೀರ ವನಿತೆಯರು ದೇಶದಲ್ಲಿ ಹುಟ್ಟಿ ಬರಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಗೃಹ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಿಕಿತಾ ಎನ್.ಪೂಜಾರಿ ರಚಿಸಿದ ರಾಣಿ ಅಬ್ಬಕ್ಕಳ ಭಾವಚಿತ್ರವನ್ನು ಮಾನ್ಯ ಶಾಸಕರಿಗೆ ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕರಾದ ಬಿ.ಕೆ. ಕುಮಾರ್ ಅವರು ಭಾಗವಹಿಸಿ ಪ್ರಾಸಬದ್ಧ ಮಾತುಗಳ ಮೂಲಕ ರಾಣಿ ಅಬ್ಬಕ್ಕಳ ಬದುಕಿನ ತತ್ವಗಳಾದ ಮಾತೃತ್ವ, ಭ್ರಾತೃತ್ವ, ಕರ್ತೃತ್ವದ ಮಹತ್ವವನ್ನು ವಿವರಿಸಿದರು.

ಬಂಕಿಮ ಚಂದ್ರ ಚಟರ್ಜಿ ಅವರ ಆನಂದ ಮಠ ಕಾದಂಬರಿಯಲ್ಲಿ ಪ್ರಕಟವಾಗಿ, ದೇಶದ ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ವಂದೇಮಾತರಂ ಗೀತೆಗೆ ನೂರ ಐವತ್ತು ವರ್ಷಗಳು ತುಂಬಿದ ಸುಸಂದರ್ಭದಲ್ಲಿ ಅತಿಥಿಗಳು, ಗಣ್ಯರು, ಅಧ್ಯಾಪಕರು ವಿದ್ಯಾರ್ಥಿಗಳು ಕೋಟಿ ಕಂಠದ ಮೂಲಕ ಗಾನನಮನ ಸಲ್ಲಿಸಿದರು.

ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬೆಸೆಂಟ್ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ., ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಕೆ.ಆರ್.ಎಂ.ಎಸ್.ಎಸ್. ನ ರಾಜ್ಯ ಜಂಟಿ ಕಾರ್ಯದರ್ಶಿ ಮತ್ತು ಅಧ್ಯಾಪಕರಾದ ಡಾ.ಮಾಧವ ಎಂ.ಕೆ. ಪ್ರಸ್ತಾವನೆಗೈದರು. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಮಾರ್ ಕೆ.ಸಿ. ಸರ್ವರನ್ನೂ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ.ಸುಭಾಷಿಣಿ ಶ್ರೀವತ್ಸ ಅತಿಥಿಗಳನ್ನು ಕರೆದುಕೊಂಡು ಸಭೆಗೆ ಪರಿಚಯಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಿರಿಯಪ್ಪ ವಂದಿಸಿದರು. ಹಿರಿಯ ಅಧ್ಯಾಪಕಿ ಜ್ಞಾನೇಶ್ವರಿ ಯಂ. ನಿರೂಪಿಸಿದರು. ವಿದ್ಯಾರ್ಥಿನಿಯರಾದ ದೀಕ್ಷಾ ಕಾಮತ್, ಸೃಷ್ಟಿ ಪ್ರಾರ್ಥಿಸಿದರು. ಉಪನ್ಯಾಸಕರಾದ ರವಿರಾಜ್ ಎಸ್. ಮತ್ತು ನಿಶ್ಮಿತಾ ಕೆ. ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News