ಬಗೆಹರಿಯದ ಎಸ್‌ಟಿಪಿ ಸಮಸ್ಯೆ: ಮನಪಾ ಸದಸ್ಯರಿಂದ ಮುಂದುವರಿದ ಆಕ್ಷೇಪ- ಅಸಮಾಧಾನ
ಮಂಗಳೂರು, ಜ.30: ನಗರ ಪಾಲಿಕೆಯ ಸಾಮಾನ್ಯ ಸಭೆಗಳಲ್ಲಿ ಕಳೆದ ಹಲವು ಸಮಯದಿಂದ ಆಡಳಿತ ಹಾಗೂ ವಿಪಕ್ಷ ಸದಸ್ಯರಿಂದ ಪ್ರಸ್ತಾಪಿಸಲಾಗುವ ಒಳಚರಂಡಿ ಅವ್ಯವಸ್ಥೆಯ ಸಮಸ್ಯೆಗಳು ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿಯೂ ಮುಂದುವರಿಯುತು.
ನಗರದ ಎಸ್‌ಟಿಪಿಗಳ ಅವ್ಯವಸ್ಥೆಯಿಂದಾಗಿ, ರಾಜಕಾಲುವೆಗಳಿಗೆ ಒಳಚರಂಡಿ ನೀರು ಹರಿದು ನದಿಗಳನ್ನು ಸೇರುತ್ತಿರುವ ಕುರಿತಂತೆ ವಿಪಕ್ಷದ ಜತೆಗೆ ಆಡಳಿತ ಪಕ್ಷದ ಸದಸ್ಯರಿಂದಲೂ ಆಕ್ಷೇಪಗಳು ವ್ಯಕ್ತವಾಯಿತು.
ಆರಂಭದಲ್ಲಿ ಸದಸ್ಯೆ ಚಂದ್ರಾವತಿಯವರು ಜನಪ್ರಿಯ ಆಸ್ಪತ್ರೆಯ ಕೊಳಚೆ ನೀರು ರಾಜಕಾಲುವೆಗೆ ಹರಿಯುತ್ತಿದೆ ಎಂದು ಆರೋಪಿಸಿದಾಗ, ಅಧಿಕಾರಿಯವರು ಪ್ರತಿಕ್ರಿಯಿಸಿ ಈಗಾಗಲೇ ಆಸ್ಪತ್ರೆಯವರು ಎಸ್‌ಟಿಪಿ ನಿರ್ಮಾಣ ಮಾಡಿದ್ದಾರೆ ಎಂದರು. ಈ ಬಗ್ಗೆ ಪರಿಶೀಲಿಸಿ, ಆಸ್ಪತ್ರೆಯ ಎಸ್‌ಟಿಪಿ 15 ದಿನಗಳಲ್ಲಿ ಕಾರ್ಯಾರಂಭಿಸದಿದ್ದರೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯ ಕೊಳಚೆ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಅವ್ಯವಸ್ಥೆ ಬಗ್ಗೆ ಕಳೆದ ಐದು ವರ್ಷಗಳಿಂದ ಮಾತನಾಡಿ ಸಾಕಾಗಿದೆ. ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮೇಯರ್‌ವರರು ಇತ್ತೀಚೆಗೆ ಭೇಟಿ ನೀಡಿ ಬಜಾಲ್ ಎಸ್‌ಟಿಪಿ ಸಮರ್ಪಕವಾಗಿ ಕಾರ್ಯಾಚರಿಸುತ್ತಿದೆ ಎಂದಿದ್ದಾರೆ. ಎಸ್‌ಟಿಪಿ ಸರಿ ಇದೆ. ಆದರೆ ಜಪ್ಪಿನಮೊಗರು ರಾಜಕಾಲುವೆಯಿಂದ ನೇತ್ರಾವತಿ ನದಿಗೆ ಕೊಳಚೆ ನೀರು ಹರಿಯುತ್ತಿದೆ. ಮದ್ಯ ಎಸ್‌ಟಿಪಿಗೆ ಕೊಳಚೆ ನೀರೇ ಹೋಗುತ್ತಿಲ್ಲ. ಅಲ್ಲಿ ಜನರೇಟರ್ ವ್ಯವಸ್ಥೆ ಸರಿಯಾಗಿಲ್ಲ. ವಿದ್ಯುತ್ ಹೋದಾಗ ಎಸ್‌ಟಿಪಿಗೆ ಹೋಗಬೇಕಾದ ನೀರು ವೆಟ್‌ವೆಲ್‌ಗಳಿಂದ ನೇರವಾಗಿ ಅಲ್ಲಿನ ನಂದಿನಿ ನದಿಗೆ ಹರಿಯುತ್ತಿದೆ ಎಂದು ಸದಸ್ಯ ಪ್ರವೀಣ್ ಚಂದ್ರ ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಸದಸ್ಯೆ ಶ್ವೇತಾ ಪೂಜಾರಿ ಮಾತನಾಡಿ, ಅಮೃತ್ ಯೋಜನೆಯಡಿ ಸುರತ್ಕಲ್ ಮಧ್ಯ ಎಸ್‌ಟಿಪಿ ಕಾಮಗಾರಿ ನಡೆಸಲಾಗಿದೆ. ಆ ಬಳಿಕ ಅದನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದ್ದರೂ ನಿರ್ವಹಣೆ ಕಾರ್ಯ ಕೆಯುಐಡಿಎಫ್‌ಸಿಯವರು ಯಾಕೆ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಾನು ಈಬಗ್ಗೆ ಪ್ರಶ್ನಿಸುತ್ತಿದ್ದರೂ ಮಾಹಿತಿ ದೊರಕಿಲ್ಲ. ವಾರ್ಡ್‌ನ ಜನ ಸಂಕಷ್ಟ ಪಡುತ್ತಿದ್ದಾರೆ ಎಂದು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ನಗರದಲ್ಲಿ ಎಸ್‌ಟಿಪಿಗಳ ದುರಸ್ತಿ, ನಿರ್ವಹಣೆ ಸೇರಿದಂತೆ ಕಾಮಗಾರಿಗಳಿಗೆ ಎಷ್ಟು ಖರ್ಚು ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ವಿನಯರಾಜ್ ಆಗ್ರಹಿಸಿದರು.
ಅಧಿಕಾರಿ ನೀಡಿದ ಉತ್ತರದಿಂದ ತೃಪ್ತರಾಗದ ವಿಪಕ್ಷ ಸದಸ್ಯರು ನಾವು ಈ ಬಗ್ಗೆ ನಾವು ಎಲ್ಲಿ ನಮ್ಮ ಪ್ರತಿಭಟನೆಯನ್ನು ಯಾವ ವೇದಿಕೆಯಲ್ಲಿ ಮಾಡಬೇಕು ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಯುಜಿಡಿ ವ್ಯವಸ್ಥೆ ಇಲ್ಲದವರಿಗೂ ನೀರಿನ ಬಿಲ್‌ನಲ್ಲಿ ಯುಜಿಡಿ ಶುಲ್ಕ
ಪಾಲಿಕೆಯ ನೀರಿನ ಬಿಲ್‌ಗಳಲ್ಲಿ ಯುಜಿಡಿ (ಒಳಚರಂಡಿ ಸಂಪರ್ಕ) ವ್ಯವಸ್ಥೆ ಇಲ್ಲದ ಮನೆಗಳಿಗೂ ಯುಜಿಡಿ ಶುಲ್ಕ ವಿಧಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ಬಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಪ್ರೇಮಾನಂದ ಶೆಟ್ಟಿಯವರು ಮೇಯರ್ ಆಗಿದ್ದ ವೇಳೆ ಯುಜಿಡಿ ಸಂಪರ್ಕ ಹೊಂದಿರದ ಮನೆಗಳ ಶುಲ್ಕವನ್ನು ತೆರವುಗೊಳಿಸಿದ್ದು, ಮತ್ತೆ ಯಾಕೆ ಆರಂಭಿಸಲಾಗಿದೆ ಎಂದು ಸದಸ್ಯ ವಿನಯರಾಜ್ ಪ್ರಶ್ನಿಸಿದರು.
ತಾಂತ್ರಿಕ ಕಾರಣದಿಂದ ಈ ರೀತಿಯ ಬಿಲ್ ಕೆಲವರಿಗೆ ಹೋಗುತ್ತಿದ್ದು, ಆ ರೀತಿ ಯುಜಿಡಿ ವ್ಯವಸ್ಥೆ ಇಲ್ಲದೆಯೂ ಶುಲ್ಕ ನೀಡಲಾಗುತ್ತಿದ್ದರೆ, ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಾಗ ಸರಿಪಡಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಹ್ಯಾಮಿಲ್ಟನ್ ಸರ್ಕಲ್ ಅಭಿವೃದ್ಧಿಗೆ ಬ್ಯಾನರ್ ಹಿಡಿದು ಪ್ರತಿಭಟಿಸಿದ ಸದಸ್ಯ
ಇತಿಹಾಸವಿರುವ ಹ್ಯಾಮಿಲ್ಟನ್ ವೃತ್ತವನ್ನು ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ತೆರವುಗೊಳಿಸಲಾಗಿದ್ದು, ಆ ರಸ್ತೆಯನ್ನು ಏಕಮುಖ ಸಂಚಾರಗೊಳಿಸಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ ಎಂದು ಆಕ್ಷೇಪಿಸಿ ಸದಸ್ಯ ಅಬ್ದುಲ್ ಲತೀಫ್ ಬ್ಯಾನರ್ ಹಿಡಿದು ಸದನದಲ್ಲಿ ಪ್ರತಿಭಟಿಸಿದರು.
ಈ ಸಂದರ್ಭ ಸುಧೀರ್ ಶೆಟ್ಟಿಯವರು ಮಾತನಾಡಿ, ಈ ರಸ್ತೆಯಲ್ಲಿ ಸ್ಪೀಕರ್‌ರವರು ಓಡಾಡುತ್ತಾರೆ ಅವರ ಗಮನಕ್ಕೆ ಇದು ಬಂದಿಲ್ಲವೇ ಎಂದು ವ್ಯಂಗ್ಯವಾಡಿದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಎರಡೆರಡು ಬಾರಿ ನಗರಕ್ಕೆ ಬಂದ ಮುಖ್ಯಮಂತ್ರಿ ಗಮನಕ್ಕೆ ಯಾಕೆ ತಂದಿಲ್ಲ ಎಂದು ರೇಗಿಸಿದರು.
ಇದರಿಂದ ಆಕ್ರೋಶಗೊಂಡ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಆಡಳಿತ ವೈಫಲ್ಯವಿದು, ಸ್ಥಳೀಯ ಶಾಸಕರು ಯಾಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಯಾಗಿ ಪ್ರಶ್ನಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಡಿಸಿಪಿ ರವಿಶಂಕರ್‌ರವರು, ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಜಂಕ್ಷನ್ ಅಭಿವೃದ್ಧಿ ಬಗ್ಗೆ ಎನ್‌ಐಟಿಕೆಯ ತಜ್ಞರ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.
ಈ ಬಗ್ಗೆ ಕಳೆದ ಹಲವು ಸಮಯದಿಂದ ಜನರು ಸಮಸ್ಯೆ ಎದುರಿಸುತ್ತಿದ್ದು, ತಕ್ಷಣ ಕ್ರಮ ಆಗಬೇಕು ಎಂದು ಅಬ್ದುಲ್ ರವೂಫ್ ಒತ್ತಾಯಿಸಿದಾಗ, ಸೋಮವಾರ ತಜ್ಞರ ಜತೆ ಸ್ಥಳ ಪರಿಶೀಲನೆ ನಡೆಸಲು ಮೇಯರ್ ಮನೋಜ್ ಕುಮಾರ್ ಸೂಚಿಸಿದರು.
ನೀರಿನ ಸಮಸ್ಯೆ ಬಗೆಹರಿಸಲು ಪೋಸ್ಟರ್ ಪ್ರದರ್ಶನ
ಪಾಲಿಕೆ ಸದಸ್ಯೆ ಸಂಶಾದ್ ಅಬೂಬಕರ್‌ರವರು ತಮ್ಮ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಕುರಿತಂತೆ ಹಲವು ಸಮಯದಿಂದ ಪ್ರಸ್ತಾಪಿಸುತ್ತಿದ್ದರೂ ಪರಿಹಾರ ದೊರಕಿಲ್ಲ. ಕುಡಿಯುವ ನೀರಿಗೆ ಪ್ರಮುಖ ಆದ್ಯತೆ ನೀಡಬೇಕಾಗಿರುವುದು ಪಾಲಿಕೆ ಆಡಳಿತದ ಕರ್ತವ್ಯ. ಆದರೆ ನಮ್ಮ ವಾರ್ಡ್‌ನ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಬೋರ್‌ವೆಲ್ ಕೊರೆದರೆ, ಅದಕ್ಕೆ ವಿದ್ಯುತ್ ಸಂಪರ್ಕಕ್ಕೆ ಹಲವು ಸಮಯ ಕಾಯಬೇಕಾಗುತ್ತದೆ ಎಂದು ಆಕ್ಷೇಪಿಸಿದರು.
ಸದಸ್ಯೆ ತಮ್ಮ ವಾರ್ಡ್‌ನ ಸಮಸ್ಯೆಯನ್ನು ಹಲವು ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಯಾಕೆ ಪರಿಹಾರವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ಮೇಯರ್ ಮನೋಜ್‌ಕುಮಾರ್ ಪ್ರಶ್ನಿಸಿದಾಗ, ತಕ್ಷಣ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಉತ್ತರಿಸಿದರು.
ಮತ್ತೆ ಪ್ರತಿಧ್ವನಿಸಿದ ಅಂಬೇಡ್ಕರ್ ಸರ್ಕಲ್
ನಗರದ ಹೃದಯಭಾಗದಲ್ಲಿ (ಹಳೆಯ ಜ್ಯೋತಿ ವೃತ್ತ) ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣವಾಗಿ, ವೃತ್ತ ನಿರ್ಮಾಣಕ್ಕೆ ನಿರ್ಧಾರವಾಗಿದ್ದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಎಂದು ಸದಸ್ಯ ಭರತ್ ಕುಮಾರ್ ಸಭೆಯ ಗಮನ ಸೆಳೆದರು.
ಈ ಸಂದರ್ಭ ಸದಸ್ಯ ವಿನಯರಾಜ್ ಮಾತನಾಡಿ, ಈಗಾಗಲೇ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಗುದ್ದಲಿ ಪೂಜೆಯೂ ಆಗಿದೆ. ಜಾಗದ ಕೊರತೆ ಇದ್ದಲ್ಲಿ ಅಲ್ಲಿರುವ ಶಾಲೆ, ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಇತರರ ಬಳಿ ಚರ್ಚಿಸಿ ಜಾಗ ಸ್ವಾಧೀನ ಪಡಿಸಲು ಪಾಲಿಕೆ ಯಾಕೆ ಆಸಕ್ತಿ ವಹಿಸಿಲ್ಲ ಎಂದು ಪ್ರಶ್ನಿಸಿದರು.
ಪಾಲಿಕೆಯ ನೂತನ ಆಯುಕ್ತ ರವಿಚಂದ್ರ ನಾಯಕ್ ಪ್ರತಿಕ್ರಿಯಿಸಿ, ಈ ಬಗ್ಗೆ ಕೂಡಲೇ ಅಧಿಕಾರಿಗಳ ಜಜೆ ಚರ್ಚಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.