ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
Update: 2025-02-07 21:38 IST
ಮಂಗಳೂರು: ಸುಮಾರು 12 ವರ್ಷದಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿ ಕಡಬ ತಾಲೂಕಿನ ಕೋನಲು ಗ್ರಾಮದ ಪ್ರಸ್ತಯು ನಾಟೆಕಲ್ ಬಳಿ ವಾಸವಾಗಿದ್ದ ಅಬ್ದುಲ್ ಹಮೀದ್ (50)ನನ್ನು ಮಂಗಳೂರಿನ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈತ 1999ರಲ್ಲಿ ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ 2012ರಲ್ಲಿ ಬಂದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 3 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡು ಪ್ರಕರಣದ ವಿಚಾರಣೆ ಸಮಯ ಹಾಜರಾಗದೆ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಧರ್ಮಸ್ಥಳ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸಿ ಮುಂದಿನ ಕ್ರಮಕ್ಕಾಗಿ ಕದ್ರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್, ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ., ಎಸ್ಸೈ ನರೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.