ಪತ್ರಕರ್ತ ಬಾಳೆಪುಣಿಯಿಂದ ಸಾಮಾನ್ಯ ಸಾಧಕರ ಬದುಕಿನ ಅನಾವರಣ: ಡಾ. ವಿವೇಕ ರೈ
ಮಂಗಳೂರು, ಫೆ. 20: ದಿವಂಗತ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರು ತಮ್ಮ ಕೃತಿಯ ಮೂಲಕ ಸಾಮಾನ್ಯ ಸಾಧಕರು ಬದುಕು ಕಟ್ಟಿಕೊಂಡ ಬಗೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಹಿರಿಯ ಪತ್ರಕರ್ತ ದಿ. ಗುರುವಪ್ಪ ಬಾಳೆಪುಣಿಯವರ ‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಶುಭ ನುಡಿಗಳನ್ನಾಡಿದರು.
ವೈಯಕ್ತಿಕ ಬದುಕಿನಲ್ಲಿ ನೈತಿಕತೆ, ಸಾಮಾಜಿಕ ಬದುಕಿನಲ್ಲಿ ಪಾರದರ್ಶಕತೆ ಹಾಗೂ ಪತ್ರಿಕೋದ್ಯಮದಲ್ಲಿ ನಿಷ್ಟುರತೆಯನ್ನು ಕಾಪಾಡಿಕೊಂಡವರು. ಯಾವುದೇ ರೀತಿಯ ಪದವಿ, ಪ್ರಶಸ್ತಿಗಿಂತಲೂ ಮಿಗಿಲಾದುದು ಅವಲೋಕನ ಶಕ್ತಿ ಹಾಗೂ ಸಾಮಾಜಿಕ ಕಾಳಜಿ ಹಾಗೂ ವೃತ್ತಿ ಬದ್ಧತೆ. ಆ ವ್ಯಕ್ತಿತ್ವ ಗುರುವಪ್ಪ ಬಾಳೆಪುಣಿಯವರಲ್ಲಿತ್ತು. ಅದರಿಂದಾಗಿಯೇ ತಾವು ಪತ್ರಿಕೆಯ ಮೂಲಕ ಪರಿಚಯಿಸಿದ ಸಾಮಾನ್ಯರಲ್ಲಿ ಸಾಮಾನ್ಯ ಸಾಧಕರ ಬಗ್ಗೆ ಪುಸ್ತಕವಾಗಿ ಪ್ರಕಟಿಸುವ ಪ್ರಯತ್ನ ನಡೆಸಿದ್ದರು. ಇದೀಗ ಅವರ ಅಗಲಿಕೆಯ ಬಳಿಕ ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ವಿಷಾದದ ಸಂಗತಿ ಎಂದವರು ಹೇಳಿದರು.
ಕೃತಿಯ ಕುರಿತಾಗಿ ಮಾತನಾಡಿದ ಹೊಸದಿಗಂತ ಪತ್ರಿಕೆಯ ಸಿಇಒ ಹಾಗೂ ಸಂಪಾದಕ ಪಿ.ಎಸ್. ಪ್ರಕಾಶ್, ಬಾಳೆಪುಣಿ ಯವರು ಲೇಖನವಾಗಿ ಪ್ರಕಟಿಸಿದ ಸಾಧಕರಲ್ಲಿ ಆಯ್ದ 10 ಮಂದಿಯ ಬಗ್ಗೆ ಪುಸ್ತಕದಲ್ಲಿ ಬರೆದಿದ್ದಾರೆ. ಪುಸ್ತಕದ ಮೂಲಕ ವ್ಯಕ್ತಿಗಳ ಪರಿಚಯ ಮಾತ್ರವಲ್ಲದೆ, ಅವರ ಜೀವನದ ಮಜಲುಗಳನ್ನು ತೆರೆದಿಟ್ಟಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲಿನ ಸಮಾಜದ ಪರಿಸ್ಥಿತಿ ಹೇಗಿದೆ ಎಂಬುದನ್ನೂ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ ಎಂದರು.
ಚಿತ್ತಾರ ಬಳಗದ ಸ್ಥಾಪಕ ಸಂಚಾಲಕ ಹಾಗೂ ದಿ. ಗುರುವಪ್ಪ ಬಾಳೆಪುಣಿಯವರ ಆತ್ಮೀಯ ಚಂದ್ರಶೇಖರ ಪಾತೂರು, ಪುಸ್ತಕ ಪ್ರಕಟಿಸಿದ ಅನಂತ ಪ್ರಕಾಶದ ಮಿಥುನ ಕೊಡೆತ್ತೂರು ಬಾಳೆಪುಣಿಯವರ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್‌ನ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಗುರುವಪ್ಪ ಬಾಳೆಪುಣಿ ಯವರ ಪುತ್ರ ಮನೇಶ್, ಪತ್ನಿ ಜಯಂತಿ ಹಾಗೂ ಸಹೋದರ ಪುತ್ರ ಸುಧೀರ್ ಸೇರಿದಂತೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಸಾಮಾನ್ಯ ವ್ಯಕ್ತಿಯಾದ ನಾನು ದೇಶದ ರಾಷ್ಟ್ರಪತಿ, ಪ್ರಧಾನಿ ಎದುರು ನಿಂತು ಸನ್ಮಾನ ಪಡೆಯುವ ಅವಕಾಶವನ್ನು ಗುರುವಪ್ಪ ಅವರಂತಹ ಪತ್ರಕರ್ತರ ಮೂಲಕ ನನಗೆ ದೊರಕಿತು. ಇದೀಗ ಗುರುವಪ್ಪ ಬಾಳೆಪುಣಿಯವರ ಪುಸ್ತಕವನ್ನು ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅವರು ನಮ್ಮನ್ನು ಅಗಲಿದರೂ ಅವರನ್ನು ನೆನಪಿಸುವ ಕಾರ್ಯ ಈ ಕೃತಿ ಬಿಡುಗಡೆಯ ಮೂಲಕ ಆಗಿದೆ’ ಎಂದು ಕೃತಿಯನ್ನು ಬಿಡುಗಡೆಗೊಳಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನುಡಿದರು.