ಎರ್ಮಾಳು ತೆಂಕ: ರೆಸಾರ್ಟ್‍ನಿಂದ ಅನಧಿಕೃತ ಕಾಮಗಾರಿ ಆರೋಪ; ಮೀನುಗಾರರ, ಕೃಷಿಕರ ವಿರೋಧ
ಪಡುಬಿದ್ರಿ: ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ನಿರ್ಮಾಣವಾಗಿರುವ ಖಾಸಗಿ ವ್ಯಕ್ತಿಗೆ ಸೇರಿದ ರೆಸಾರ್ಟ್ ಮಾಲೀಕರಿಂದ ಆಕ್ರಮ ಚರಂಡಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳೀಯರುವ ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್, ಸ್ಥಳೀಯ ಮೀನುಗಾರರ, ಕೃಷಿಕರ ಅಹವಾಲನ್ನು ಸ್ವೀಕರಿಸಿ ಕೂಡಲೇ ಸರ್ವೆ ಮಾಡಿಸಿ ಸರ್ಕಾರಿ ಜಾಗ ಗುರುತಿಸಿ ಖಚಿತಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೂಡಲೇ ಸರ್ವೆ ಮಾಡಿಸಿ ಸರ್ಕಾರಿ ಜಾಗ ಗುರುತಿಸಿ ಖಚಿತಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ತಹಶೀಲ್ದಾರ್, ಗ್ರಾಮ ಆಡಳಿತಾಧಿಕಾರಿ ವಿಜಯ್, ಆರ್‍ಐ ಇಜ್ಜಾರ್ ಸಾಬಿರ್ ರವರಿಗೆ ಆದೇಶ ನೀಡಿದರು. ಪಿಡಿಓ ರಜನಿಯವರಿಗೆ ಸರ್ಕಾರಿ ವ್ಯಾಪ್ತಿಯ ಜಾಗಗಳಲ್ಲಿ ಕಾಮಗಾರಿಗೆ ಯಾವುದೇ ಅನುಮತಿ ನೀಡದಿರುವಂತೆ ಸೂಚನೆ ನೀಡಿದರು. ಪಡುಬಿದ್ರಿ ಎಸ್‍ಐ ಪ್ರಸನ್ನ ಒತ್ತುವರಿ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಕಾಪು ತಾಲೂಕಿನಲ್ಲಿ ಸರ್ಕಾರಿ ಜಾಗ ಒತ್ತುವರಿ ಕಂಡುಬಂದಲ್ಲಿ ಸಾರ್ವಜನಿಕರು ತಹಶಿಲ್ದಾರ್‍ರವರಿಗೆ ನೇರ ದೂರು ನೀಡಬೇಕು ಎಂದರು.
ಎಚ್ಚರಿಕೆ: ಎರ್ಮಾಳು ತೆಂಕ ವ್ಯಾಪ್ತಿಯಲ್ಲಿ ಕರಾವಳಿ ನಿಯಂತ್ರಣ ಪರಿಸರ ವಲಯದಲ್ಲಿ ಬೀಚ್ ಸಮೀಪದ ರೆಸಾರ್ಟ್ ಗಳ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಅನಧಿಕೃತ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಜಾಗದ ತೋಡು ಗಳನ್ನು ಆಕ್ರಮಿಸಿಕೊಂಡು ಒತ್ತುವರಿ ಮಾಡಿ ನೈಸರ್ಗಿಕ ಹರಿವಿಗೆ ತಡೆ ಒಡ್ಡುತ್ತಿರುವುದು ಕಂದಾಯ ಇಲಾಖೆಯ ಗಮನಕ್ಕೆ ಬಂದಿದೆ. ಇದನ್ನು ಖಂಡಿತ ಸಹಿಸುವುದಿಲ್ಲ. ಈ ರೀತಿ ಒತ್ತುವರಿ ಮಾಡಿದ್ದರೆ ಕೂಡಲೇ ತೆರವುಗೊಳಿಸಬೇಕು. ಕಾಮಗಾರಿ ತೊಡಗಿದ್ದರೆ ಕೂಡಲೇ ಕಾಮಗಾರಿ ನಿಲ್ಲಿಸಬೇಕು. ಇಲ್ಲವಾದರೆ ಅಂತವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಲ ಪ್ರವಾಹದ ತಡೆಯ ಮುನ್ನೆಚ್ಚರಿಕೆ: ಕಾಪು ಪರಿಸರದಲ್ಲಿ ಕಳೆದ ಬಾರಿ ಮಳೆಯಿಂದ ಅತಿ ಪ್ರವಾಹ ಉಂಟಾಗಿತ್ತು. ಹಲವು ತೋಡುಗಳು ಮುಚ್ಚಿಹೋಗಿದ್ದರಿಂದ ಈ ರೀತಿಯ ಕೃತಕ ಜಲಪ್ರವಾಹಗಳನ್ನು ಎದುರಿಸಬೇಕಾಗಿತ್ತು. ಈ ರೀತಿ ಈ ಬಾರಿ ಆಗದಂತೆ ಎಚ್ಚರ ವಹಿಸಲಾಗುತ್ತಿದೆ. ಹೀಗೆ ಸರ್ಕಾರಿ ತೋಡುಗಳನ್ನು ಆಕ್ರಮಿಸಿಕೊಂಡರೆ ಪ್ರಕೃತಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ್ ಸೂಚನೆ ನೀಡಿದ್ದಾರೆ.
ಎರ್ಮಾಳು ತೆಂಕ ಕರಾವಳಿ ಭಾಗ ಪ್ರವಾಸೋಧ್ಯಮದ ಹೆಸರಿನಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಸರಕಾರದ ಯಾವುದೇ ಮಾರ್ಗ ಸೂಚಿಯನ್ನು ಪಾಲಿಸದೆ ರೆಸಾರ್ಟ್‍ನ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ. ರೆಸಾರ್ಟ್ ಎದುರಿನ ಸರಕಾರಿ ಭೂಮಿಯನ್ನು ಅನಾಧಿಕಾಲದಿಂದಲೂ ನೀರು ಸಂಗ್ರಹಣ ಜಾಗವಾಗಿದೆ. ಅಲ್ಲದೆ ಮೀನುಗಾರಿಕೆಗೆ ಸಹಕಾರಿಯಾಗುವಂತೆ ನಾಡದೋಣಿಯು ನಿಲುಗಡೆ ಹಾಗೂ ಬಲೆ ಇಡಲಾಗುತ್ತೆ. ಈ ನೀರು ಶೇಖರಣೆ ಜಾಗವು 15ರಿಂದ 20 ಕೃಷಿ ಭೂಮಿಯ ಹೆಚ್ಚುವರಿ ನೀರು ಸಂಗ್ರಹವಾಗುವ ಜಾಗವಾಗಿದ್ದು, ಇದರ ಅಗಲ 20 ಮೀಟರ್ ಆಗಿದ್ದು, ಆಳವು ಕೃಷಿ ಗದ್ದೆ ಹಾಗೂ ತೋಟದ ಮಟ್ಟಕ್ಕಿಂತ ಕೆಳಮಟ್ಟದಲ್ಲಿತ್ತು. ಆದರೆ ಈಗ ಇದರ ಅಗಲ ಕೇವಲ 3 ಮೀಟರ್‍ಗಿಂತ ಕಡಿಮೆ ಮಾಡಿ ಆಳವನ್ನು ಕೃಷಿ ಭೂಮಿಯ ಮಟ್ಟಕ್ಕೆ ತಂದಿರುತ್ತಾರೆ, ಪರಿಣಾಮ ಹೆಚ್ಚುವರಿ ನೀರು, ಗದ್ದೆ ಹಾಗೂ ತೋಟಗಳಲ್ಲಿ ಶೇಖರಣೆಯಾಗಿ ಭತ್ತ, ತೆಂಗು ಹಾಗೂ ಇನ್ನಿತರ ಕೃಷಿ ಭೂಮಿಗಳು ಮಳೆಗಾಲದಲ್ಲಿ ನೀರು ಪಾಲಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮುಖಂಡರತ ಲೀಲಾಧರ ಸಾಲ್ಯಾನ್, ಮೀನುಗಾರರ ಪರವಾಗಿ ಯತೀಶ್ ಸುವರ್ಣ, ಆಸೀಕ್, ಸುಶಾಂತ್ ಬಂಗೇರಾ, ಸಂತೋಷ್, ಕೃಷಿಕರ ಪರವಾಗಿ ಶಂಕರ ಪೂಜಾರಿ, ಚಂದ್ರಶೇಖರ್, ರಮೇಶ್ ಉಪಸ್ಥತರಿದ್ದರು.