×
Ad

ಅಡ್ಡೂರು: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಬದ್ರಿಯಾ ಜುಮಾ ಮಸೀದಿ ವತಿಯಿಂದ ಪ್ರತಿಭಟನೆ

Update: 2025-03-09 20:47 IST

ಅಡ್ಡೂರು: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಅಡ್ಡೂರು ಕೇಂದ್ರ ಬದ್ರಿಯಾ ಜುಮಾ ಮಸೀದಿ ವತಿಯಿಂದ ಅಡ್ಡೂರು ಜಂಕ್ಷನ್ ನಲ್ಲಿ ರವಿವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬದ್ರಿಯಾ ಜುಮಾ ಮಸೀದಿ ಖತೀಬ್ ಸದಖತುಲ್ಲಾ ಫೈಝಿ, “ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನದ 26ನೇ ವಿಧಿಗೆ ವಿರುದ್ಧವಾಗಿದೆ. ಇದನ್ನು ತರಾತುರಿಯಲ್ಲಿ ಅಂಗೀರಕರಿಸಲಾಗಿದೆ. ಕೇಂದ್ರ ಸರಕಾರ ಬೆರಳೆಣಿಕೆಯ ಮೂಲಭೂತವಾದಿಗಳ ಹಿತಕ್ಕೆ ಮಣಿದು ಮಾರಕವಾದ ವಿಧೇಯಕಗಳನ್ನು ಜಾರಿಗೊಳಿಸುತ್ತಿದ್ದು, ಇದು ದೇಶ ವಿಭಜನೆಗೆ ಕಾರಣವಾಗುತ್ತಿವೆ. ಈ ಹಿಂದೆ ದೇಶದಲ್ಲಿ ಯಾವುದೇ ಮಸೂದು ಅಥವಾ ತಿದ್ದುಪಡಿ ತರುವಾಗ ಸಂವಿಧಾನದಡಿ ನ್ಯಾಯೋಚಿತ ವಾಗಿ ಲೋಕಸಭೆಯಲ್ಲಿ ಮಂಡಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ತರಾತುರಿಯಲ್ಲಿ ದ್ವೇಷದ ಮೂಲಕ ಮಸೂದೆಗಳಳನ್ನು ಜಾರಿಗೊಳಿಸುವ ಉದ್ದೇಶವೇನು? ಜನರನ್ನು ವಿಭಜಿಸುವ ತಂತ್ರವೇ? ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಹುನ್ನಾರ ಅಡಗಿದೆಯೇ” ಎಂದು ಪ್ರಶ್ನಿಸಿದರು.

“ದೇಶದಲ್ಲಿ ಇಸ್ಲಾಂ ಶಾಂತಿಯ ಮಾರ್ಗದಲ್ಲಿ ಬೆಳೆಯುತ್ತಿದೆ. ಮುಸ್ಲಿಮರನ್ನು ಮಸೂದೆ, ದಬ್ಬಾಳಿಕೆಯ ಮೂಲಕ ನಿರ್ಣಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ವಕ್ಫ್ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲು ಬಿಡುವುದಿಲ್ಲ” ಎಂದರು.

ಸಾಮಾಜಿಕ ಕಾರ್ಯಕರ್ತ ಅಶ್ರಫ್ ನಡುಗುಡ್ಡೆ ಮಾತನಾಡಿ, “ದೇಶದಲ್ಲಿ ವಿಭಜನೆ ಆಡಳಿತ ನಡೆಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರಕಾರ ವಿವಾದಿತ ವಕ್ಪ್ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ. ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ)ಯ ವರದಿಯು ಅಳವಡಿಸಿಕೊಂಡಿರುವ ಎಲ್ಲ ತಿದ್ದುಪಡಿಗಳು ಅವರಿಗೆ ಬೇಕಾಗುವ ರೀತಿಯಲ್ಲಿ ರಚಿಸಲಾಗಿದೆ. ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ವಕ್ಫ್ ಅನ್ನು ಘೋಷಿಸುವುದು ಇನ್ನು ಮುಂದೆ ಕಷ್ಟಕರವಾಗಲಿದೆ. ಎಲ್ಲಾ ವಕ್ಫ್ ಆಸ್ತಿಗಳನ್ನು ಆರು ತಿಂಗಳೊಳಗೆ ಡಿಜಿಟಲ್ ದಾಖಲೆ ಮಾಡಬೇಕು. ಇಲ್ಲದಿದ್ದರೆ ಅವುಗಳ ವಕ್ಫ್ ಸ್ಥಾನಮಾನ ಇರುವುದಿಲ್ಲ. ದಾಖಲೆಗಳಿಲ್ಲದ ಮೌಕಿಕ ಒಡಂಬಡಿಕೆಯ ಮೂಲಕ ವಕ್ಫ್ ಎಂದು ಘೋಷಿತವಾದ ವಕ್ಫ್ ಆಸ್ತಿಗಳು ಸರಕಾರದ ಸುಪರ್ದಿಯಲ್ಲಿದ್ದರೆ ಅಥವಾ ತಗಾದೆಯಲ್ಲಿದ್ದರೆ ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ, ವಕ್ಫ್ ಆಸ್ತಿಯನ್ನು ಸರಕಾರ ಒತ್ತುವರಿ ಮಾಡಿದ್ದರೆ ಆ ತಗಾದೆಯನ್ನು ಸರಕಾರವೇ ನೇಮಿಸುವ ಜಿಲ್ಲಾಧಿಕಾರಿಗಿಂತ ಮೇಲ್ಪಟ್ಟ ‘ನಿಯೋಜಿತ ಅಧಿಕಾರಿ’ ಅದರ ಬಗ್ಗೆ ವಿಚಾರಣೆ ಮಾಡಿ ತೀರ್ಮಾನ ತೆಗೆಕೊಳ್ಳಬೇಕಾಗುತ್ತದೆ. ವಕ್ಫ್ ಆಸ್ತಿಗಳ ಸರ್ವೇಯನ್ನು ಸ್ವತಂತ್ರ ಸರ್ವೇ ಕಮಿಷನರ್ ಬದಲಿಗೆ ಜಿಲ್ಲಾಧಿಕಾರಿಯೇ ಮಾಡುವುದನ್ನು ಜೆಪಿಸಿಯು ಎತ್ತಿಹಿಡಿದಿದ್ದು, ಇವೆಲ್ಲವೂ ಏಕಪಕ್ಷೀಯವಾಗಿವೆ. ಕೇಂದ್ರ ಸರಕಾರ ದುರುದ್ದೇಶ ಪೂರಿತ ತಿದ್ದುಪಡಿಗಳನ್ನು ತರುವ ಮೂಲಕ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭ ಅಡ್ಡೂರು ಬಿಜೆಎಂ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ.ಕೆ.ಅಶ್ರಫ್, ಜಂಕ್ಷನ್ ಮಸೀದಿ ಖತೀಬ್ ಜಾಫಿರ್ ಫೈಝಿ, ಅಬ್ದುಲ್ ಖಾದರ್ ನಡುಗುಡ್ಡೆ, ಇಸ್ಹಾಖ್, ಖಾಸಿಂ ಪ್ಯಾರ, ಡಿ.ಎಸ್.ರಫೀಕ್, ಎಂ.ಎಸ್.ಶೇಖಬ್ಬ, ಅಹ್ಮದ್ ಬಾವ ತೋಕೂರು ಮೊದಲಾದವರು ಉಪಸ್ಥಿತರಿದ್ದರು.

ಬಿಜೆಎಂ ಉಪಾಧ್ಯಕ್ಷ ಝೈನುದ್ದೀನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಸ್ತಾರ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು.






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News