ಮಹಿಳಾ ಸಮಾನತೆ ಕಾರ್ಯರೂಪದಲ್ಲಿ ಬರಲಿ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಮಂಗಳೂರು: ಮಹಿಳೆಯ ಮೇಲಿನ ಸಮಾನತೆ ಕೇವಲ ಮಾತಿನಲ್ಲಿ ಮಾತ್ರವಲ್ಲ ಕಾರ್ಯರೂಪದಲ್ಲೂ ಇರಬೇಕು. ಕೊರತೆಗಳಿಗಾಗಿ ಕೊರಗದೆ, ವಿನಿಯಮವೆಂದು ಹಳಿಯದೆ ಇರುವ ವ್ಯವಸ್ಥೆಯೊಳಗೆ ಸಾಧನೆಯ ಕಡೆಗೆ ನಾವು ಸಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಹೇಳಿದ್ದಾರೆ.
ಕರಾವಳಿ ಲೇಖಕಿಯರ-ವಾಚಕಿಯರ ಸಂಘದಿಂದ ರವಿವಾರ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಪ್ರದಾನ ಮಾಡಿ ಮಾತನಾಡಿದರು.
ಈಗಿನ ಸಮಾಜದಲ್ಲಿ ಮಹಿಳೆಯರು ಹಲವಾರು ಸವಾಲುಗಳನ್ನೆದುರಿಸುತ್ತಿದ್ದರೂ ಅಂತಹ ಸವಾಲು ಗಳನ್ನು ಹಸನ್ಮುಖಿಗಳಾಗಿ ಎದುರಿಸಲು ಸಾಧ್ಯ ಇದೆ. ಮಹಿಳೆಯರ ಆಲೋಚನೆ, ಚಿಂತನೆ, ತೀರ್ಮಾನ ಗಳಿಗೆ ಅವಕಾಶ ದೊರೆತರೆ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಅದಕ್ಕೆ ಪೂರಕ ವಾತಾವರಣ ಕಲ್ಪಿಸಲು ಇನ್ನೂ ಕೆಲ ವರ್ಷಗಳು ಬೇಕಾಬಹುದು. ಆದರೂ ನಾವು ನಿರಾಶರಾಗಬೇಕಿಲ್ಲ, ಅನೇಕ ಸಾಧಕ ಮಹಿಳೆಯರ ದಾರಿ ಸ್ಪಷ್ಟವಿದೆ. ಸಾಹಿತ್ಯದ ಮೂಲಕ ಮಹಿಳೆಯರನ್ನು ಗುರುತಿಸುವುದರ ಜೊತೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ಆದರೆ ಅನೇಕ ಸಂದರ್ಭದಲ್ಲಿ ಆ ಮಾನ್ಯತೆ ಸಿಗುವುದಿಲ್ಲ. ‘ಮಹಿಳೆ’ ಎಂಬ ಕಾರಣಕ್ಕೆ ಆಕೆಯ ಸಾಧನೆಯನ್ನು ನಾವು ಹಿಂದಕ್ಕೆ ತಳ್ಳುತ್ತಿದ್ದೇವೆ. ಮಹಿಳೆಗೆ ಸಾಮರ್ಥ್ಯವಿದೆ, ಆದರೆ ಅವಕಾಶ ವಂಚಿತಳಾಗುತ್ತಿದ್ದಾಳೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಸ್ತ್ರೀಯಲ್ಲಿ ಅಪಾರವಾದ ಶಕ್ತಿ ಅಡಗಿದೆ. ಹೀಗಿರುವಾಗ ಕೇವಲ ತನ್ನ ಹಕ್ಕಿನ ಬಗೆಗೆ ಮಾತ್ರ ಚಿಂತಿಸದೆ ತನ್ನೆಲ್ಲಾ ಪ್ರತಿಭೆಯನ್ನು ಹೊರಗೆಡಹುವ ಬಗೆಗೆ ಯೋಚಿಸಬೇಕು. ಹೆಣ್ಣಿನಲ್ಲಿ ಹೆಚ್ಚಿನ ಹೃದಯಶೀಲತೆ ಇರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತಂದೆಯ ಹೊರತಾಗಿಯೂ ಮಕ್ಕಳನ್ನು ಬೆಳೆಸುವ, ಅವರ ಭೌತಿಕ, ಮಾನಸಿಕ ಬೆಳವಣಿಗೆಗೆ ಸ್ಪಂದಿಸುವ ಸಾಮರ್ಥ್ಯ ಹೆಣ್ಣಿಗಿದೆ. ಆದ್ದರಿಂದ ಹೆಣ್ಣಾಗಿ ಹುಟ್ಟುವುದು ಪುಣ್ಯವೆಂದು ಭಾವಿಸಬೇಕು ಎಂದರು.
ಕಾಸರಗೋಡು ಸರ್ಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪಿ. ಕೃಷ್ಣ ಭಟ್, ಆಕಾಶವಾಣಿ ಬೆಂಗಳೂರಿನ ವಿಶ್ರಾಂತ ಸಹಾಯಕ ನಿರ್ದೇಶಕಿ ಕನ್ಸೆಪ್ಟಾ ಫೆರ್ನಾಂಡಿಸ್, ಯೆನೆಪೋಯ ಸ್ವಾಯತ್ತ ವಿ.ವಿ. ಪ್ರಾಧ್ಯಾಪಕಿ ಡಾ. ಸಕೀನಾ ನಾಸಿರ್, ಹಿರಿಯ ಲೇಖಕಿ ಶಾರದಾ ಶೆಟ್ಟಿ, ಬಂಟ್ವಾಳ ಸರಕಾರಿ ಪ್ರ.ದ. ಕಾಲೇಜು ಪ್ರಾಂಶುಪಾಲ ಡಾ. ಪ್ರಕಾಶ್ಚಂದ್ರ ಶಿಶಿಲ, ಕಾಂತಿ ರೈ, ಮಮತಾ ತಿಲಕ್ ರಾವ್, ಸಂಘದ ಕಾರ್ಯದರ್ಶಿ ಯಶೋದಾ ಮೋಹನ್, ಉಪಾಧ್ಯಕ್ಷೆ ಅರುಣಾ ನಾಗರಾಜ್, ಜೊತೆ ಕಾರ್ಯದರ್ಶಿ ಕೃಷ್ಣವೇಣಿ ಆರ್., ಕೋಶಾಧಿಕಾರಿ ಮೋಲಿ ಮಿರಾಂದಾ ಮತ್ತಿತರರು ಉಪಸ್ಥಿತರಿದ್ದರು.
ದತ್ತಿ ಪ್ರಶಸ್ತಿ-ಪುಸ್ತಕ ಬಹುಮಾನ ಪ್ರದಾನ
ಇದೇ ಸಂದರ್ಭದಲ್ಲಿ ನಾಡೋಜ ಡಾ. ಸಾರಾ ಅಬೂಬಕರ್ ದತ್ತಿನಿಧಿ-ಸಾರಾ ದತ್ತಿ ಪ್ರಶಸ್ತಿಯನ್ನು ಡಾ. ಗೀತಾ ಶೆಣೈ, ಚಂದ್ರಭಾಗಿ ರೈ ದತ್ತಿನಿಧಿ-ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ರಾಜಲಕ್ಷ್ಮೀ ಕೋಡಿಬೆಟ್ಟು, ಡಾ. ಮಮತಾ ತಿಲಕ್ ರಾವ್ ಮುಂಬಯಿ ದತ್ತಿನಿಧಿ-ಅಮ್ಮ ಪ್ರಶಸ್ತಿಯನ್ನು ಲೇಖಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿ, ಅನನ್ಯ ಸಾಧಕಿ ಪ್ರಶಸ್ತಿಯನ್ನು ಗ್ರಾಮ ಪಂಚಾಯತ್ ಸದಸ್ಯೆ ಶಮೀಮಾ ಅವರಿಗೆ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಹಯೋಗದಲ್ಲಿ ನೀಡಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಯಶೋದಾ ಮೋಹನ್ ಸ್ವಾಗತಿಸಿದರು. ರೇಖಾ ಶಂಕರ್ ನಿರೂಪಿಸಿ, ರೂಪಕಲಾ ಆಳ್ವ ವಂದಿಸಿದರು.
‘‘ಮಹಿಳೆಗೆ ಸ್ಥಾನಮಾನ ಸಿಕ್ಕಿಲ್ಲ. ಮಹಿಳೆಯರ ಆಲೋಚನೆಗಳು ಪುರುಷ ಚಿಂತನೆಯ ಹಿನ್ನೆಲೆಯಲ್ಲೇ ಇದ್ದು, ಇದು ಬದಲಾಯಿಸಬೇಕು. ಉನ್ನತ ಸ್ಥಾನಕ್ಕೆ ಹೋದರೂ ಮಹಿಳೆ ಎಂಬ ಕಾರಣಕ್ಕೆ ಸಮಾನ ಅವಕಾಶ ಸಿಗುತ್ತಿಲ್ಲ.
-ಡಾ. ವಿದ್ಯಾ ಕುಮಾರಿ, ಉಡುಪಿ ಜಿಲ್ಲಾಧಿಕಾರಿ