×
Ad

ಮಂಗಳೂರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಜನ್ಮದಿನೋತ್ಸವ ಕಾರ್ಯಕ್ರಮ

Update: 2025-06-03 21:38 IST

ಮಂಗಳೂರು: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ.ಜಿ. ಅವರಿಂದ ಸತತ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ್ಯಕ್ರಮ ಬಾಲಗಾನ ಯಶೋಯಾನಕ್ಕೆ ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಯಿತು.

ವಿರಾಜಪೇಟೆ ಡಿವೈಎಸ್ಪಿ ಎಸ್.ಮಹೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕರಾವಳಿ ಸಂಗೀತ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಉದ್ಯಮಿಗಳಾದ ಮಲ್ಲಿಕಾ ಶೆಟ್ಟಿ, ರಾಘವೇಂದ್ರ ಆಚಾರ್ಯ, ಕೆ.ಕೆ.ನೌಷಾದ್ ಭಾಗವಹಿಸಿದ್ದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷಿಯಾ ಹೆಡ್ ಡಿ.ಮನೀಶ್ ವಿಶ್ನೋಯ್ ಉಪಸ್ಥಿತರಿದ್ದರು.

ಮ್ಯಾಂಡೋಲಿನ್ ವಾದಕ ದೇವರಾಜ ಆಚಾರ್, ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್, ಸಂಗೀತ ಕಲಾವಿದ ತೋನ್ಸೆ ಪುಷ್ಕಳ ಕುಮಾರ್‌ಗೆ ಗುರುವಂದನೆ ಸಲ್ಲಿಸಲಾಯಿತು. ಗಾಯಕ ಯಶವಂತ್ ಎಂ.ಜಿ.ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

*ಜೂ.3ರ ಅಪರಾಹ್ನ 3 ಗಂಟೆಯಿಂದ ಆರಂಭಗೊಂಡ ಗಾಯನ ಕಾರ್ಯಕ್ರಮವು ಜೂ.4 ಅಪರಾಹ್ನ 3 ಗಂಟೆಯವರೆಗೆ ನಡೆಯಲಿದೆ. ನಿರಂತರವಾಗಿ ಗಾಯಕ ಎಸ್‌ಪಿಬಿ ಅವರು ಹಾಡಿದ ಶೇ.90ರಷ್ಟು ಕನ್ನಡ ಚಿತ್ರಗೀತೆಗಳು, ಶೇ.5ರಷ್ಟು ಭಕ್ತಿ ಗೀತೆಗಳು ಹಾಗೂ ಶೇ.5ರಷ್ಟು ಭಾವಗೀತೆಗಳನ್ನು ಯಶವಂತ ಹಾಡಲಿದ್ದಾರೆ. ಅದಕ್ಕಾಗಿ 240ಕ್ಕಿಂತ ಹೆಚ್ಚಿನ ಹಾಡುಗಳನ್ನು ಸಿದ್ಧಮಾಡಿಕೊಂಡಿದ್ದಾರೆ.

ಈ ಮಧ್ಯೆ ಗಂಟೆಗೊಮ್ಮೆ 5 ನಿಮಿಷಗಳ ವಿರಾಮ ಇರುತ್ತದೆ. ಆಹಾರ ಸೇವಿಸದೆ ಬರೀ ಜ್ಯೂಸ್ ಕುಡಿದು ಹಾಡುವ ಕೆಲಸ ಮಾಡುತ್ತಲಿದ್ದಾರೆ. ಒಂದು ಗಂಟೆ ಕುಳಿತು, ಇನ್ನೊಂದು ಗಂಟೆ ನಿಂತು ಹಾಡಲಿದ್ದಾರೆ. ಇವರಿಗೆ ಗಿಟಾರ್‌ನಲ್ಲಿ ರಾಜ್‌ಗೋಪಾಲ್, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ, ತಬಲದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷ ಬಸ್ರೂರ್ ಹಾಗೂ ಸಿತಾರ್‌ನಲ್ಲಿ ಸುಮುಖ್ ಆಚಾರ್ಯ ಭಾಗವಹಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News