×
Ad

ಗ್ರಾಮಸ್ಥರ ಸಹಕಾರವಿದ್ದರೆ ಶಾಲೆಗಳ ಅಭಿವೃದ್ಧಿ: ಸ್ಪೀಕರ್ ಯು.ಟಿ ಖಾದರ್

Update: 2025-06-28 23:20 IST

ಕೊಣಾಜೆ: ಊರಿನ ಸರ್ಕಾರಿ ಶಾಲೆಗಳಿಗೆ ಆಯಾ ಪ್ರದೇಶದ ಗ್ರಾಮಸ್ಥರ ಸಹಕಾರ ದೊರೆತರೆ ಎಲ್ಲಾ ಸೌಲಭ್ಯಗಳೊಂದಿಗೆ ಶಾಲೆಯು ಅಭಿವೃದ್ಧಿ ಕಾಣುವುದರಲ್ಲಿ ಸಂಶಯವಿಲ್ಲ.‌ ಇದಕ್ಕೆ ನ್ಯೂಪಡ್ಪುವಿನ ಶಾಲೆಯೇ ಸಾಕ್ಷಿಯಾಗಿದೆ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.

ಅವರು ಹರೇಕಳ ಗ್ರಾಮದ ನ್ಯೂಪಡ್ಪು ಸರಕಾರಿ ಪ್ರಾಥಮಿಕ ಶಾಲೆಗೆ ಹೊಸದಾಗಿ ನಿರ್ಮಿಸಲಾದ ನಾಲ್ಕು ಕೊಠಡಿಗಳ ಒಂದಸ್ತಿನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಶಾಲೆಯಲ್ಲಿ ಬೇರೆ ಬೇರೆ ಕಾರಣದಿಂದ ವಿದ್ಯಾರ್ಥಿಗಳ ಕೊರತೆಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿಯ ಗ್ರಾಮ ಪಂಚಾಯಿತಿ ಆಡಳಿತ, ಶಾಲಾಭಿವೃದ್ಧಿ ಸಮಿತಿ, ದಾನಿಗಳು ಹಾಗೂ ಶಿಕ್ಷಕ ವರ್ಗದ ಸಹಕಾರದಿಂದ ಅಹರ್ನಿಶಿ ದುಡಿದ ಕಾರಣ ಎಲ್ ಕೆ ಜಿ, ಯು ಕೆ ಜಿ ಜೊತೆಗೆ ಒಂದು ಹಾಗೂ ಎರಡನೆಯ ತರಗತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆ ಮಾಡಲಾಯಿತು. ಅದರಿಂದಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ಮಾತನಾಡಿ ಹರೇಕಳ ನ್ಯೂಪಡ್ಪುವಿನಲ್ಲಿ ಪದವಿಪೂರ್ವ ಕಾಲೇಜು ಆರಂಭವಾಗಿದ್ದು ದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ನೂತನ ಸುಸಜ್ಜಿತ ಕಟ್ಟಡಕ್ಕೆ ಅನುದಾನ ಒದಗಿಸಿಕೊಡುವಂತೆ ಶಾಸಕರಲ್ಲಿ ವಿನಂತಿಸಿದರು.

ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಬದ್ರುದ್ದಿನ್ ಹರೇಕಳ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫ ಶಾಲಾ ಅಭಿವೃದ್ಧಿಯ ಪಥದ ಕುರಿತಾಗಿ ಮಾತುಗಳನ್ನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ , ಸಮಾಜಸೇವಕಿ ಮೈಮುನಾ ರಾಜ್ ಕಮಲ್, ಡಿಡಿಪಿಐ ಗೋವಿಂದ ಮಡಿವಾಳ, ತಾಲೂಕು ಪಂಚಾಯತ್ ಸಿಇಒ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ವಾರ್ಡ್ ಸದಸ್ಯರುಗಳಾದ ಸತ್ತಾರ್, ಬಶೀರ್ ಹಾಗೂ ಸಿದ್ದಿಕ್, ಸದಸ್ಯೆ ಕಲ್ಯಾಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಿಯಾಝ್ ಹಾಗೂ ಪ್ರಾಂಶುಪಾಲ ಮುಸ್ತಫ, ಶಿಕ್ಷಕಿಯರಾದ ಪ್ರೇಮಲತಾ, ಶ್ವೇತಾ, ಸಮೀನಾ ಹಾಗೂ ಪುಷ್ಪಲತಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರೀ ಸ್ವಾಗತಿಸಿದರು. ನಾಗರಾಜ ಪಟಗಾರ ನಿರೂಪಣೆಗೈದರು. ವಿದ್ಯಾಕಿರಣ್ ಸನ್ಮಾನಪತ್ರ ವಾಚಿಸಿದರು. ವಿನ್ನಿ ಲೆನ್ನಿ ಲೂಯಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News