×
Ad

ಮಂಗಳೂರು: ಭಾರೀ ಗಾಳಿ, ಮಳೆ; ಹಲವು ಕಡೆ ಮರಗಳು ಬಿದ್ದು ಹಾನಿ

Update: 2025-07-06 21:34 IST

ಮಂಗಳೂರು: ಆಗಾಗ ಜೋರು ಮಳೆ, ಮೋಡ ಮುಸುಕಿದ ವಾತಾವರಣ, ಬಿಸಿಲು ಕಾಣಲೇ ಇಲ್ಲ. ಇದು ದ.ಕ. ಜಿಲ್ಲೆಯಲ್ಲಿ ರವಿವಾರ ವಿವಿಧಡೆ ಕಂಡು ಬಂದ ವಾತಾವರಣ.

ಮಳೆಯೊಂದಿಗೆ ಕೆಲವಡೆ ಗಾಳಿ ಬೀಸಿದ ಪರಿಣಾಮವಾಗಿ ಕೆಲವು ಕಡೆ ಮರಗಳು ಉರುಳಿ ಬಿದ್ದಿರುವ, ಅಡಿಕೆ ಮರಗಳು ಮುರಿದು ಬಿದ್ದಿರುವ ಘಟನೆ ವರದಿಯಾಗಿದೆ.

ಕೆದಿಲ ಗ್ರಾಮದ ಮಾರಪ್ಪ ಸುವರ್ಣ ಎಂಬವರ ಮಾಲಕತ್ವದ ಜಮೀನಿನಲ್ಲಿರುವ ಬ್ರಹ್ಮಶ್ರೀನಾರಾಯಣ ಗುರು ಸೇವಾ ಸಂಘದ (ರಿ) ನಿರ್ಮಾಣ ಹಂತದ ಸಭಾಭವನದ ಕಟ್ಟಡದ ಮೇಲೆ ಅಕೇಶಿಯಾ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಮಾಣಿ-ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಮರಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಆಗಿರುವುದು ವರದಿಯಾಗಿದೆ.

ಮಳೆಯಿಂದಾಗಿ ಜಿಲ್ಲೆಯಲ್ಲಿ 1ಮನೆ ಭಾಗಶ: ಹಾನಿಯಾಗಿದೆ ಎಂದು ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ತಿಳಿಸಿದೆ.

ಮಳೆಯಿಂದಾಗಿ ಜಿಲ್ಲೆಗಳ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಬೆಳಗ್ಗೆ 8:30ರ ತನಕ 24 ಗಂಟೆಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಸರಾಸರಿ 45.1 ಮಿ.ಮೀ ಮಳೆಯಾಗಿದೆ. ಸುಳ್ಯ ತಾಲೂಕಿನಲ್ಲಿ ಗರಿಷ್ಠ ಮತ್ತು ಮೂಲ್ಕಿಯಲ್ಲಿ ಕನಿಷ್ಠ ಮಳೆಯಾಗಿದೆ.

ಬೆಳ್ತಂಗಡಿ 35.2 ಮಿ.ಮೀ, ಬಂಟ್ವಾಳ 55.1 ಮಿ.ಮೀ, ಮಂಗಳೂರು 26.3 ಮಿ.ಮೀ, ಪುತ್ತೂರು 50.0 ಮಿ.ಮೀ, ಸುಳ್ಯ 68.4 ಮಿ.ಮೀ, ಮೂಡಬಿದ್ರೆ 32.5 ಮಿ.ಮೀ, ಕಡಬ 49.2 ಮಿ.ಮೀ, ಮೂಲ್ಕಿ 15.4 ಮಿ.ಮೀ, ಉಳ್ಳಾಲ 34.9 ಮಿ.ಮೀ ದಾಖಲಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿತ್ತು. ನೀರಿನ ಮಟ್ಟ ನೇತ್ರಾವತಿಯ ಎ.ಎಂ.ಆರ್ ಡ್ಯಾಮ್ 18.90 ಮೀಟರ್, ಗರಿಷ್ಠ(18.90 ಮೀ) ಮತ್ತು ನೇತ್ರಾವತಿ ತುಂಬೆ ಅಣೆಕಟ್ಟು ನೀರಿನ ಮಟ್ಟ 4.90 ಮೀ(ಅಪಾಯದ ಮಟ್ಟ 6 ಮೀಟರ್) ಇದೆ.

ನೇತ್ರಾವತಿ ನದಿಯು ನೀರಿನ ಮಟ್ಟ ಬಂಟ್ವಾಳದಲ್ಲಿ 4.60 ಮೀ(ಅಪಾಯದ ಮಟ್ಟ 9 ಮೀ) ಮತ್ತು ಉಪ್ಪಿನಂಗಡಿಯಲ್ಲಿ ನೀರಿನ ಮಟ್ಟ 26.90 ಮೀ( ಅಪಾಯದ ಮಟ್ಟ 31.5 ಮೀ) ತಲುಪಿದೆ.

4 ದಿನ ಯೆಲ್ಲೋ ಅಲರ್ಟ್:ಮುಂದಿನ 4 ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು ದ.ಕ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News