ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ SSI ಮಂತ್ರ 3.0 ಉದ್ಘಾಟನೆ
ಹೃದಯ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ ತಂತ್ರಜ್ಞಾನದ ಪ್ರಯೋಗ
ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ವತಿಯಿಂದ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಎರಡನೇ ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆ – SSI ಮಂತ್ರ 3.0 ಉದ್ಘಾಟನೆ ಆ.28ರಂದು ಸಂಜೆ ನೆರವೇರಿತು.
ಈ ಸಂದರ್ಭದಲ್ಲಿ ವಿಶ್ವಪ್ರಸಿದ್ಧ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಸುಧೀರ್ ಶ್ರೀವಾಸ್ತವ (ಸ್ಥಾಪಕ ಅಧ್ಯಕ್ಷ – SS ಇನೋವೇಷನ್ಸ್ ಇಂಟರ್‌ನ್ಯಾಷನಲ್) ಅವರ ನೇತೃತ್ವದಲ್ಲಿ ಮೊದಲ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು.
ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ವೀಡಿಯೊ ಸಂದೇಶದ ಮೂಲಕ ಶುಭಾಶಯಗಳನ್ನು ತಿಳಿಸಿ, “ಭಾರತೀಯ ತಂತ್ರಜ್ಞಾನದಲ್ಲಿ ನಿರ್ಮಿತವಾದ ರೋಬೋಟಿಕ್ ವ್ಯವಸ್ಥೆಯ ಪ್ರಾರಂಭವು ವಿಶ್ವವಿದ್ಯಾಲಯದ ಶ್ರೇಷ್ಠತೆಯತ್ತದ ಪ್ರಮುಖ ಹೆಜ್ಜೆ ಶ್ರೇಷ್ಠತೆಯತ್ತದ ಮಹತ್ವದ ಹೆಜ್ಜೆಯಾಗಿದೆ ಎಂದು ಪುನರುಚ್ಚರಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್ ಎ.ಎ. ಅವರು ಅತಿಥಿಗಳನ್ನು ಬರಮಾಡಿಕೊಂಡು, SSI ಮಂತ್ರ 3.0 ಮೂಲಕ ಉನ್ನತ ಮಟ್ಟದ ನಿಖರ ಶಸ್ತ್ರಚಿಕಿತ್ಸೆ ಸಾಮಾನ್ಯ ಜನತೆಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು. ಅವರು ಮುಖ್ಯ ಅತಿಥಿ ಹೆಚ್ ವಿ. ದರ್ಶನ್, ಐ.ಎ.ಎಸ್, ಉಪ ಆಯುಕ್ತರು (ದ.ಕ., ಮಂಗಳೂರು), ವಿಶೇಷ ಅತಿಥಿ ಡಾ. ಸುಧೀರ್ ಶ್ರೀವಾಸ್ತವ, ಸಹ ಕುಲಪತಿ ಫರ್ಹಾದ್ ಯೆನೆಪೋಯ, ಉಪ ಕುಲಪತಿ ಡಾ. ಎಂ. ವಿಜಯಕುಮಾರ್, ಹಿರಿಯ ಸಲಹೆಗಾರ ಡಾ. ಎಂ.ಎ. ವಾಣಿ ಸೇರಿದಂತೆ ಗಣ್ಯರನ್ನು ಸ್ವಾಗತಿಸಿದರು.
ಡಾ. ಜಲಾಲುದ್ದೀನ್ ಅಕ್ಬರ್ ಅವರ ವಿಶೇಷ ವೀಡಿಯೊ ಪ್ರಸ್ತುತಿಯಲ್ಲಿ, ಡಾ. ವಿನ್ಸಿ ಸಿಸ್ಟಮ್‌ನಿಂದ ಸ್ವದೇಶಿ SSI ಮಂತ್ರದವರೆಗೆ ಯೆನೆಪೋಯದ ರೋಬೋಟಿಕ್ ಶಸ್ತ್ರಚಿಕಿತ್ಸಾ ಪ್ರಯಾಣವನ್ನು ಪರಿಚಯಿಸಿದರು.
ತಮ್ಮ ಭಾಷಣದಲ್ಲಿ ಉಪ ಕುಲಪತಿ ಡಾ. ಎಂ. ವಿಜಯಕುಮಾರ್, ಸುಮಾರು ದಶಕದ ಹಿಂದೆ ರೂಪುಗೊಂಡಿದ್ದ ದೃಷ್ಟಿಯನ್ನು ನೆನಪಿಸಿಕೊಂಡು, ಈ ಸಾಧನೆಯನ್ನು ‘ಕನಸು ಸಾಕಾರವಾದ ಕ್ಷಣ’ ಎಂದು ವರ್ಣಿಸಿದರು. ಕಾರ್ಪೊರೇಟ್ ಆಸ್ಪತ್ರೆಗಳಲ್ಲದೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೇ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸೆ ಯನ್ನು ಸಾಧ್ಯವಾಗಿಸಿದಕ್ಕಾಗಿ ಕುಲಪತಿ, ಸಹ ಕುಲಪತಿ ಹಾಗೂ ಡಾ. ಶ್ರೀವಾಸ್ತವರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ 100ಕ್ಕೂ ಹೆಚ್ಚು ಬೋಧಕ ವೃಂದ, 140ಕ್ಕೂ ಹೆಚ್ಚು ಶೈಕ್ಷಣಿಕ ಕೋರ್ಸ್‌ಗಳು ಮತ್ತು 1,100 ಹಾಸಿಗೆಗಳ ಬಹುಮುಖ ಆಸ್ಪತ್ರೆಯೊಂದಿಗೆ ವಿಶ್ವವಿದ್ಯಾಲಯವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ ಎಂದರು.
ಮುಖ್ಯ ಅತಿಥಿ ಡಾ. ಹೆಚ್. ವಿ. ದರ್ಶನ, ಐ.ಎ.ಎಸ್ ಅವರು SSI ಮಂತ್ರವನ್ನು ಉದ್ಘಾಟಿಸಿ, ಯೆನೆಪೋಯ ವಿಶ್ವವಿದ್ಯಾಲಯದ ನವೀನ ಪ್ರಯತ್ನಗಳನ್ನು ಪ್ರಶಂಸಿಸಿದರು. “ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ಮುಂತಾದ ಆವಿಷ್ಕಾರಗಳು ಭವಿಷ್ಯದ ಆರೋಗ್ಯ ಸೇವೆಯ ಮಾರ್ಗವನ್ನು ತೋರಿಸುತ್ತವೆ. ಇಂದಿನ ದಿನವನ್ನು ಈ ಪ್ರದೇಶದ ತಾಂತ್ರಿಕ ಕ್ರಾಂತಿಯ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆಯಲಾಗುತ್ತದೆ” ಎಂದರು.
ಡಾ. ಸುಧೀರ್ ಶ್ರೀವಾಸ್ತವ ಅವರು ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, “ರೋಬೋಟಿಕ್ ಶಸ್ತ್ರಚಿಕಿತ್ಸೆ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ನನ್ನ ಕನಸು” ಎಂದು ಹಂಚಿಕೊಂಡರು. ಅಮೆರಿಕಾದಿಂದ ಭಾರತಕ್ಕೆ ವಾಪಸಾದ ತನ್ನ ಪ್ರಯಾಣವನ್ನು ನೆನೆಸಿಕೊಂಡ ಅವರು, ಭಾರತದಲ್ಲಿ ಹಾಗೂ ವಿದೇಶದಲ್ಲಿ 50ಕ್ಕೂ ಹೆಚ್ಚು ಟೆಲಿ-ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದ ವಿಚಾರವನ್ನು ಉಲ್ಲೇಖಿಸಿದರು. ಅಲ್ಲದೆ ಮುಂದಿನ ತಿಂಗಳಲ್ಲಿ ಯೆನೆಪೋಯ ಹೃದ್ರೋಗ ವಿಭಾಗಕ್ಕೆ ಉಚಿತವಾಗಿ ಒಂದು ರೋಬೋಟಿಕ್ ಸಿಸ್ಟಮ್ ನೀಡುವುದಾಗಿ ಘೋಷಿಸಿದರು.
ಕುಲಪತಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ದಯೆ ಹಾಗೂ ನವೀನತೆಯ ಸಂಯೋಜನೆಯೇ ಯೆನೆಪೋಯದ ಮುಖ್ಯ ಧ್ಯೇಯ. ಉನ್ನತ ಮಟ್ಟದ ಚಿಕಿತ್ಸೆ ಸರ್ಕಾರದ ಯೋಜನೆಗಳಡಿ ಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡು ವುದು ನಮ್ಮ ಗುರಿ. ಪ್ರತಿಯೊಂದು ಸಾಧನೆಯೂ ನನ್ನ ತಂದೆ, ಪರಮಪೂಜ್ಯ ಯೆನೆಪೋಯ ಮೊಯ್ದಿನ್ ಕುಂಞಿ ಅವರ ಕನಸನ್ನು ನನಸಾಗಿಸುವ ದಾರಿಗೆ ಇಟ್ಟಿರುವ ಮೈಲುಗಲ್ಲು” ಎಂದರು.
ಡಾ. ಮುಜೀಬ್ ರಹಮಾನ್ ಅವರು ವಂದಿಸಿದರು. ಅವರು SSI ಇನೋವೇಷನ್ಸ್ ತಂಡ, ಶಸ್ತ್ರಚಿಕಿತ್ಸಕರು, ಸಹಭಾಗಿಗಳು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು, ಉಪ ಸಹಕುಲಪತಿ ಡಾ. ಶ್ರೀಪತಿ ರಾವ್, ರಿಜಿಸ್ಟ್ರಾರ್ ಡಾ. ಗಂಗಾಧರ ಸೊಮಯಾಜಿ, ಹಣಕಾಸು ಅಧಿಕಾರಿ, ಹೃದ್ರೋಗ ತಜ್ಞರು, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು ಹಾಗೂ ಇತರ ಎಲ್ಲಾ ಅತಿಥಿಗಳ ಸಹಕಾರದಿಂದ ಈ ಐತಿಹಾಸಿಕ ಸಾಧನೆ ಸಾಧ್ಯವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪರಿಚಯ:
ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಅಗ್ರಶ್ರೇಯದ ಬಹು-ತಜ್ಞರ ಶಿಕ್ಷಣ ಆಸ್ಪತ್ರೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಾನವೀಯ ಮೌಲ್ಯಗಳ ಆರೈಕೆಯನ್ನು ಅತಿ ಸುಧಾರಿತ ಚಿಕಿತ್ಸೆಗಳೊಂದಿಗೆ ಸಂಯೋಜಿಸಿದೆ — ಇದರಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ, ಅರ್ಬುದರೋಗ, ಹೃದ್ರೋಗ ಚಿಕಿತ್ಸೆ ಮತ್ತು ತುರ್ತು ಆರೈಕೆ ಸೇರಿದಂತೆ ಅನೇಕ ವಿಶೇಷತೆಗಳು ಒಳಗೊಂಡಿವೆ. ಸುಗಮ ಆರೋಗ್ಯ ಸೇವೆಗೆ ಹೆಚ್ಚಿನ ಒತ್ತು ನೀಡಿರುವ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಸರ್ಕಾರಿ ಹಾಗೂ ಅರೆ ಸರ್ಕಾರಿ ವಿಮಾ ಯೋಜನೆಗಳ ಮೂಲಕ ಕೈಗೆಟುಕುವ ಚಿಕಿತ್ಸೆಯನ್ನು ಒದಗಿಸುವುದರ ಜೊತೆಗೆ, ಭಾರತ ಮತ್ತು ವಿದೇಶಗಳಿಂದ ಬರುವ ಭವಿಷ್ಯದ ವೈದ್ಯಕೀಯ ತಜ್ಞರಿಗೆ ತರಬೇತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಪರಿಚಯ
NAAC A+ ಶ್ರೇಣಿಯೊಂದಿಗೆ ಮಾನ್ಯತೆ ಪಡೆದ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ಕರಾವಳಿ ಕರ್ನಾಟಕದ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದ ಮುಂಚೂಣಿ ಸಂಸ್ಥೆಯಾಗಿದೆ. NIRF 2024 ಶ್ರೇಣಿಯಲ್ಲಿ ಭಾರತದಲ್ಲಿ 95ನೇ ಸ್ಥಾನವನ್ನು, ಹಾಗು ವಿಶ್ವವಿದ್ಯಾನಿಲಯದ ದಂತವೈದ್ಯಕೀಯ ಕಾಲೇಜು 26ನೇ ಸ್ಥಾನವನ್ನು ಪಡೆದಿರುತ್ತದೆ. ಐದು ಆವರಣಗಳಲ್ಲಿ ವ್ಯಾಪಿಸಿರುವ ಈ ವಿಶ್ವವಿದ್ಯಾಲಯವು 11 ಅಂಗ ಸಂಸ್ಥೆಗಳ ಮೂಲಕ ವೈದ್ಯಕೀಯ, ದಂತವೈದ್ಯಕೀಯ, ಪರಾಮೆಡಿಕಲ್, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿಭಿನ್ನ ವೃತ್ತಿಪರ ಶೈಕ್ಷಣಿಕ ವ್ಯಾಸಂಗವನ್ನು ರೂಪಿಸುತ್ತಿದೆ. ಸ್ಥಿರತೆಯ ಹಾಗೂ ಹಸಿರು ಉಪಕ್ರಮಗಳಿಗಾಗಿ NABH ನಿಂದ ಗುರುತಿಸಲ್ಪಟ್ಟ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಆವರಣವು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನವೀನತೆಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ.