×
Ad

1 ಸಾವಿರ ಕೋಟಿ ರೂ. ಮೌಲ್ಯದ ಸರಕಾರಿ ಭೂಮಿ ವಶ: ಪತ್ರಕರ್ತ ಸೇರಿದಂತೆ 14 ಮಂದಿಯ ಬಂಧನ

Update: 2024-07-29 21:10 IST

ಸಾಂದರ್ಭಿಕ ಚಿತ್ರ

ಕಾನ್ಪುರ: ಮಾರುಕಟ್ಟೆಯಲ್ಲಿ 1 ಸಾವಿರ ಕೋ.ರೂ. ಮೌಲ್ಯವಿರುವ ಸರಕಾರಿ ಭೂಮಿಯನ್ನು ವಶಪಡಿಸಿಕೊಂಡ ಆರೋಪದಲ್ಲಿ ಟಿ.ವಿ. ಪತ್ರಕರ್ತ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಂದಾಯ ಅಧಿಕಾರಿ ಹಾಗೂ ಈ ಭೂಮಿಯನ್ನು ಗುತ್ತಿಗೆ ಪಡೆದುಕೊಂಡ ಸ್ಯಾಮುವೆಲ್ ಗುರುದೇವ್ ಸಿಂಗ್ ದಾಖಲಿಸಿದ ದೂರುಗಳ ಹಿನ್ನೆಲೆಯಲ್ಲಿ ಪತ್ರಕರ್ತ ಅವನೀಶ್ ದೀಕ್ಷಿತ್ ಹಾಗೂ ಇತರರನ್ನು ರವಿವಾರ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ದೀಕ್ಷಿತ್ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ಹರೀಶ್ ಚಂದ್ರ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ 1 ಸಾವಿರ ಕೋಟಿ ರೂ. ಮೌಲ್ಯ ಇರುವ ಐಷಾರಾಮಿ ಸಿವಿಲ್ ಲೈನ್ಸ್‌ನಲ್ಲಿರುವ 7,500 ಚದರ ಮೀಟರ್ ಸರಕಾರಿ ಭೂಮಿಯನ್ನು ದೀಕ್ಷಿತ್ ಹಾಗೂ ಇತರರು ವಶಪಡಿಸಿಕೊಂಡಿರುವ ಆರೋಪದ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಅವನೀಶ್ ದೀಕ್ಷಿತ್ ಮತ್ತು ಅವರ ಜನರು ಬೀಗಗಳನ್ನು ಮುರಿದು ಕೊಠಡಿಗಳಿಗೆ ಬೀಗ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಭೂಮಿ ಸರಕಾರಿ ಭೂಮಿ (ನಝುಲ್) ಆಗಿದೆ ಹಾಗೂ ಗುತ್ತಿಗೆ ಅವಧಿ ಈಗಾಗಲೇ ಕೊನೆಗೊಂಡಿದೆ ಎಂಬುದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಕಂದಾಯ ಇಲಾಖೆಯ ತಂಡ ಪತ್ತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಈ ಭೂಮಿಯನ್ನು 1984ರಲ್ಲಿ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಅನಂತರ ಈ ಗುತ್ತಿಗೆಯನ್ನು 25 ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಆದರೆ, ಈ ಅವಧಿ ಕೂಡ ಕೊನೆಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News