ಮಹಾರಾಷ್ಟ್ರ| ಎರಡು ಗುಂಪುಗಳ ನಡುವೆ ಘರ್ಷಣೆ : 10 ಜನರಿಗೆ ಗಾಯ
Photo credit: indiatoday.in
ಮುಂಬೈ: ಮಹಾರಾಷ್ಟ್ರ ಕೊಲ್ಲಾಪುರದ ಸಿದ್ಧಾರ್ಥನಗರ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದು ಸುಮಾರು 10 ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
"ರಾಜೇಬಾಗ್ಸ್ವರ್ ಫುಟ್ಬಾಲ್ ಕ್ಲಬ್" (Rajebagswar Football Club)ನ 31ನೇ ವರ್ಷಾಚರಣೆಯ ಹಿನ್ನೆಲೆ ಆಯೋಜಿಸಿದ ಕಾರ್ಯಕ್ರಮದ ಸಂದರ್ಭದಲ್ಲಿ ಹಿಂಸಾಚಾರ ನಡೆದಿದೆ. ಕಾರ್ಯಕ್ರಮದ ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಧ್ವನಿ ವರ್ಧಕ ವ್ಯವಸ್ಥೆ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಉದ್ವಿಗ್ನತೆ ಉಂಟಾಗಿದೆ.
ರಾತ್ರಿ 10 ಗಂಟೆಯ ಸುಮಾರಿಗೆ ಎರಡೂ ಕಡೆಯವರು ಕಲ್ಲು ತೂರಾಟ ನಡೆಸಿದರು. ಕನಿಷ್ಠ ಎರಡು ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ಹಲವು ವಾಹನಗಳನ್ನು ಧ್ವಂಸ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.