ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ನಾಳೆ (ಜುಲೈ 9) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಕಾರ್ಮಿಕ ಸಂಘಟನೆಗಳು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ದೇಶ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ನಾಳೆ (ಜುಲೈ 9) ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರವನ್ನು ಯಶಸ್ಸುಗೊಳಿಸುವಂತೆ ಒತ್ತಾಯಿಸಿದೆ.
ಪ್ರತಿಭಟನೆಗೆ ಕೃಷಿ ಕೂಲಿ ಕಾರ್ಮಿಕರ ಜಂಟಿ ರಂಗವಾದ ಸಂಯುಕ್ತ ಕಿಸಾನ್ ಮೋರ್ಚಾ, ನರೇಗಾ ಸಂಘರ್ಷ್ ಮೋರ್ಚಾ ಸೇರಿದಂತೆ ಸಂಘಟನೆಗಳು ಬೆಂಬಲ ಸೂಚಿಸಿರುವುದರಿಂದ ತಮಿಳುನಾಡು, ಬಿಹಾರ, ಕೇರಳ ಹಾಗೂ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಮುಷ್ಕರ ಬಂದ್ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ಕಾರ್ಮಿಕ ನಾಯಕರು ತಿಳಿಸಿದ್ದಾರೆ.
ಸೋಮವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರ್‌ಜೀತ್ ಕೌರ್, ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿಯಾಗುವ ನಿರೀಕ್ಷೆ ಇದೆ. ರೈತರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕಾರ್ಮಿಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಮುಷ್ಕರದಿಂದಾಗಿ ಬ್ಯಾಂಕಿಂಗ್, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಕಾರ್ಖಾನೆಗಳು, ರಾಜ್ಯ ಸಾರಿಗೆ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹಿಂದ್ ಮಝ್ದೂರ್ ಸಭಾದ ಹರ್ಭಜನ್ ಸಿಂಗ್ ಸಿಧು ಹೇಳಿದರು.