ಸಸ್ಯಾಹಾರಿ ಆಹಾರಕ್ಕೆ ಪ್ರತ್ಯೇಕ ಮೇಜು ವಿರೋಧಿಸಿದ ಐಐಟಿ ಬಾಂಬೆ ವಿದ್ಯಾರ್ಥಿಗೆ 10,000 ರೂ. ದಂಡ
Photo: PTI
ಮುಂಬೈ: ಸಸ್ಯಾಹಾರಿಗಳಿಗಾಗಿ ಮೇಜುಗಳನ್ನು ಮೀಸಲಿಡುವುದನ್ನು ವಿರೋಧಿಸಿದ ಓರ್ವ ವಿದ್ಯಾರ್ಥಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ 10,000 ರೂಪಾಯಿ ದಂಡ ವಿಧಿಸಿದೆ. 12, 13 ಮತ್ತು 14ನೇ ಹಾಸ್ಟೆಲ್ ಗಳಿಗಾಗಿರುವ ಕ್ಯಾಂಟೀನ್ ನಲ್ಲಿ ಆರು ಮೇಜುಗಳನ್ನು ಮಾಂಸ ತಿನ್ನದವರಿಗಾಗಿ ಮೀಸಲಿಡುವ ನಿರ್ಧಾರವನ್ನು ಐಐಟಿಯ ಮೆಸ್ ಕೌನ್ಸಿಲ್ ಕಳೆದ ವಾರ ತೆಗೆದುಕೊಂಡಿತ್ತು.
ಸೆಪ್ಟಂಬರ್ 28ರಂದು, ಅಂಥ ಒಂದು ಮೇಜಿನಲ್ಲಿ ಮಾಂಸಾಹಾರವನ್ನು ತಿನ್ನುವ ಮೂಲಕ ಮೆಸ್ ಕೌನ್ಸಿಲ್ ನಿರ್ಧಾರವನ್ನು ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟಿಸಿತು. ಈ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡುವ ಇಮೇಲ್ ಗಳನ್ನು ಪ್ರತಿಭಟನಕಾರರು ಮೆಸ್ ಮತ್ತು ಹಾಸ್ಟೆಲ್ ಅಧಿಕಾರಿಗಳಿಗೆ ಕಳುಹಿಸಿದ್ದರು.
ಅಕ್ಟೋಬರ್ 2ರಂದು, ‘ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್’ ಎಂಬ ಹೆಸರಿನ ವಿದ್ಯಾರ್ಥಿಗಳ ಒಕ್ಕೂಟವು ಮೆಸ್ ಕೌನ್ಸಿಲ್ ಸಭೆಯ ನಿರ್ಣಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪ್ರಸ್ತಾಪಿಸಿರುವ ಸಭೆಯು, ‘‘ಇದು ಮೆಸ್ ಶಾಂತಿ ಮತ್ತು ಸೌಹಾರ್ದತೆಯನ್ನು ನಾಶಪಡಿಸಲು ರೂಪಿಸಲಾಗಿರುವ ಪೂರ್ವಯೋಜಿತ ಕೃತ್ಯವಾಗಿದೆ. ವಿದ್ಯಾರ್ಥಿಗಳ ವ್ಯವಹಾರಗಳ ಅಸೋಸಿಯೇಟ್ ಡೀನ್ ಹೊರಡಿಸಿರುವ ಸಲಹೆಯ ಉಲ್ಲಂಘನೆಯಾಗಿದೆ’’ ಎಂಬ ನಿರ್ಣಯವನ್ನು ತೆಗೆದುಕೊಂಡಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಓರ್ವ ವಿದ್ಯಾರ್ಥಿಗೆ 10,000 ರೂ. ದಂಡವನ್ನು ವಿಧಿಸುವ ನಿರ್ಣಯವನ್ನೂ ಅದು ತೆಗೆದುಕೊಂಡಿದೆ. ಈ ಪ್ರತಿಭಟನೆಯಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಹೇಳಿರುವ ನಿರ್ಣಯವು, ಅವರ ಗುರುತನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ ಎಂದು ಹೇಳಿದೆ.
ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗೆ 10,000 ರೂ. ದಂಡ ವಿಧಿಸಿರುವ ಮೆಸ್ ಆಡಳಿತದ ಕ್ರಮವು, ‘‘ಆಧುನಿಕ ಕಾಲದಲ್ಲೂ ಅಸ್ಪಶ್ಯತೆಯನ್ನು ಎತ್ತಿಹಿಡಿಯುವ ಖಾಪ್ ಪಂಚಾಯತ್ ಗಳ ಕೃತ್ಯಕ್ಕೆ ಸಮವಾಗಿದೆ’’ ಎಂದು ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡೀ ಸರ್ಕಲ್ ಅಭಿಪ್ರಾಯಪಟ್ಟಿದೆ.