ತಮಿಳುನಾಡು | ದೇವಾಲಯದ ಉತ್ಸವದ ವೇಳೆ ಪ್ರಸಾದ ಸೇವಿಸಿ ಭಕ್ತಾದಿಗಳು ಅಸ್ವಸ್ಥ: 107 ಮಂದಿ ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ | NDTV
ಚೆನ್ನೈ: ತಮಿಳುನಾಡಿನ ವಿರುಧನಗರ ಜಿಲ್ಲೆಯ ಕಲ್ವಿಮಡೈ ಗ್ರಾಮದಲ್ಲಿ ದೇವಾಲಯದ ಉತ್ಸವವೊಂದರಲ್ಲಿ ಪ್ರಸಾದ ಸೇವಿಸಿದ ಬಳಿಕ ಅಸ್ವಸ್ಥಗೊಂಡ 107 ಮಂದಿ ಭಕ್ತಾದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ನೀಡಿದ ಊಟ ಸೇವಿಸಿದ ಕೂಡಲೇ ಹಲವಾರು ಭಕ್ತಾದಿಗಳಲ್ಲಿ ವಾಂತಿ ಮತ್ತು ಭೇದಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಪೈಕಿ ಕೆಲವರಿಗೆ ಸ್ಥಳೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಭಕ್ತಾದಿಗಳ ಪರಿಸ್ಥಿತಿ ವಿಷಮಿಸಿದ್ದರಿಂದ ಅವರನ್ನು ಮಧುರೈನ ಸರಕಾರಿ ರಾಜಾಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಹಿಳಾ ಭಕ್ತೆಯೋರ್ವರು, ನಾನು ಕೇವಲ ಸಸ್ಯಾಹಾರ ಮಾತ್ರ ಸೇವಿಸಿದೆ. ಆದರೆ, ಏನು ತಪ್ಪಾಯಿತು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಭಕ್ತಾದಿಗಳ ಪೈಕಿ 55 ಮಹಿಳೆಯರು ಹಾಗೂ 11 ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗೆ ವಿಷಪೂರಿತ ಆಹಾರ ಸೇವನೆ, ಕಲುಷಿತ ನೀರು ಕಾರಣವೆಂದು ಸರಕಾರಿ ರಾಜಾಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಶಂಕಿಸಿದ್ದಾರೆ.