ಆಂಧ್ರಪ್ರದೇಶ | ದಲಿತ ಬಾಲಕಿ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ: 13 ಮಂದಿ ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ (PTI)
ಎಡ್ಗುರಳ್ಳಿಪಳ್ಳಿ (ಆಂಧ್ರಪ್ರದೇಶ): ಶ್ರೀ ಸತ್ಯ ಜಿಲ್ಲೆಯಲ್ಲಿ ಸತತ ಎರಡು ವರ್ಷಗಳ ಕಾಲ 15 ಹರೆಯದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಜೂನ್ 9ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚಂಪಲ್ಲಿ ವರ್ಧನ್ (21), ತಲರಿ ಮುರಳಿ (25), ಬಡಗೋರ್ಲಾ ನಂದವರ್ಧನ್ ರಾಜ್ (23), ಅರೆಂಚೆರು ನಾಗರಾಜು (51), ಬೋಯಾ ಸಂಜೀವ್ (40) ಹಾಗೂ ರಾಜಣ್ಣ ಎಂಬ ಆರೋಪಿಗಳನ್ನು ಜೂನ್ 9ರಂದು ಬಂಧಿಸಲಾಗಿದೆ. ಉಳಿದ ಏಳು ಆರೋಪಿಗಳನ್ನು ಜೂನ್ 10ರಂದು ಬಂಧಿಸಲಾಗಿದ್ದು, ಮುಖ್ಯ ಆರೋಪಿ ಇನ್ನೂ ತಲೆ ಮರೆಸಿಕೊಂಡಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ವಿ.ರತ್ನ ಮಾತನಾಡಿ, ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸಂತ್ರಸ್ತ ಬಾಲಕಿಯ ಕೆಲವು ಅಶ್ಲೀಲ ಚಿತ್ರಗಳು ಹಾಗೂ ವಿಡಿಯೊಗಳನ್ನು ತೋರಿಸಿ, ಆಕೆಯನ್ನು ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ಹೇಳಲಾಗಿದೆ. ಸಂತ್ರಸ್ತ ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಅನಂತಪುರಂ ಜಿಲ್ಲೆಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಗರ್ಭಾವಸ್ಥೆ ಅವಧಿ ಮೀರಿರುವುದರಿಂದ, ಆಕೆಗೆ ಗರ್ಭಪಾತ ನಡೆಸದಿರಲು ವೈದ್ಯರು ಹಾಗೂ ಜಿಲ್ಲೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.