ರಾಜಸ್ಥಾನ | ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜಸ್ಥಾನ: ಪರೀಕ್ಷೆಗೆ ಮುನ್ನಾದಿನ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟಾದಲ್ಲಿ ನಡೆದಿದೆ.
ರವಿವಾರ ರಾಷ್ಟ್ರವ್ಯಾಪಿ ವೈದ್ಯಕೀಯ ಪ್ರವೇಶಾತಿಗೆ ನೀಟ್ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಬೇಕಿತ್ತು. ಆದರೆ, ಆಕೆ ಶನಿವಾರ ಕೋಟಾದ ಪಾರ್ಶವನಾಥ್ ಪ್ರದೇಶದಲ್ಲಿ ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ʼಕೋಟದಲ್ಲಿ ತಂದೆ ತಾಯಿಯೊಂದಿಗೆ ವಿದ್ಯಾರ್ಥಿನಿ ವಾಸವಿದ್ದಳು. ಶನಿವಾರ ಸಂಜೆ ವಿದ್ಯಾರ್ಥಿನಿ ಸ್ಕಾರ್ಫ್ ಬಳಸಿ ತನ್ನ ಕೊಠಡಿಯಲ್ಲಿ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ʼಎಂದು ಪೊಲೀಸರು ತಿಳಿಸಿದ್ದಾರೆ.
ಕುನಾಡಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅರವಿಂದ್ ಭಾರದ್ವಾಜ್ ಈ ಕುರಿತು ಪ್ರತಿಕ್ರಿಯಿಸಿ, ರಾತ್ರಿ 10 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡಿರುವುದು ಪೋಷಕರ ಗಮನಕ್ಕೆ ಬಂದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ವಿದ್ಯಾರ್ಥಿನಿ ನಗರದ ಪ್ರಮುಖ ತರಬೇತಿ ಕೇಂದ್ರವೊಂದರಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ರವಿವಾರ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಳು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
2025ರ ಜನವರಿಯಿಂದ ಇಲ್ಲಿಯವರೆಗೆ ಕೋಟಾದಲ್ಲಿ ನಡೆದ 14ನೇ ಪ್ರಕರಣ ಇದಾಗಿದೆ. ಕಳೆದ ವರ್ಷ ಕೋಟಾದಲ್ಲಿ ಒಟ್ಟು 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.