ಮಣಿಪುರ | ಇಂಫಾಲ ಬಳಿ ಅಸ್ಸಾಂ ರೈಫಲ್ಸ್ ಟ್ರಕ್ ಮೇಲೆ ದಾಳಿ : ಇಬ್ಬರು ಯೋಧರು ಹುತಾತ್ಮ
PC : NDTV
ಇಂಫಾಲ: ಶುಕ್ರವಾರ ಸಂಜೆ ಮಣಿಪುರದ ಇಂಫಾಲದ ಹೊರವಲಯದಲ್ಲಿ ಬಂದೂಕುಧಾರಿಗಳು ಅಸ್ಸಾಂ ರೈಫಲ್ಸ್ ಟ್ರಕ್ ಮೇಲೆ ದಾಳಿ ಮಾಡಿದ್ದು, ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಇಂಫಾಲ ವಿಮಾನ ನಿಲ್ದಾಣದಿಂದ ಸುಮಾರು 8 ಕಿಮೀ ದೂರವಿರುವ ನಂಬೋಲ್ ಸಬಲ್ ಲೈಕೈ ಪ್ರದೇಶದಿಂದ ಬಿಷ್ಣುಪುರ್ ಗೆ ತೆರಳುತ್ತಿದ್ದ ಅರೆಸೇನಾ ಪಡೆಯ 407 ಟಾಟಾ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿದೆ.
ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಓರ್ವ ಸೇನಾಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದು, ಆ ಪ್ರದೇಶದಲ್ಲಿ ಭಾರಿ ಪ್ರಮಾಣದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿರುವುದನ್ನು ಕಾಣಬಹುದಾಗಿದೆ.
ಅಸ್ಸಾಂ ರೈಫಲ್ಸ್ ವಾಹನಕ್ಕೆ ದಾಳಿ ಮಾಡಿದ ಸ್ಥಳವು ಇಂಫಾಲ ಹಾಗೂ ಚೂರ ಚಂದ್ ಪುರ್ ಮಧ್ಯದಲ್ಲಿದೆ.
ಈ ಘಟನೆಯನ್ನು ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಖಂಡಿಸಿದ್ದು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.