×
Ad

2020ರ ದಿಲ್ಲಿ ಗಲಭೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆಯಿಂದ 11 ಆರೋಪಿಗಳ ಖುಲಾಸೆ

Update: 2025-05-17 15:37 IST

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಗಲಭೆಗಳ ಸಂದರ್ಭ ಬೆಂಕಿ ಹಚ್ಚಿದ್ದ,ಮಾರಕ ಆಯುಧಗಳೊಂದಿಗೆ ಗಲಭೆ ನಡೆಸಿದ್ದ ಮತ್ತು ಅಕ್ರಮವಾಗಿ ಗುಂಪು ಸೇರಿದ್ದ ಆರೋಪಗಳನ್ನು ಎದುರಿಸುತ್ತಿದ್ದ 11 ಜನರನ್ನು ದಿಲ್ಲಿಯ ಕರ್ಕರಡೂಮಾ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಪ್ರಾಸಿಕ್ಯೂಷನ್ ಸಾಕ್ಷಿಗಳಾದ ಎಎಸ್‌ಐಗಳಾದ ಜಹಾಂಗೀರ್ ಮತ್ತು ವನ್ವಿರ್ ಅವರು 2020, ಫೆ.24ರಂದು ಗಲಭೆಕೋರರ ನಡುವೆ ಆರೋಪಿಗಳನ್ನು ನಿಜವಾಗಿಯೂ ನೋಡಿದ್ದರೆ ಮತ್ತು ಗುರುತಿಸಿದ್ದರೆ ಅವರು ಇಷ್ಟು ದೀರ್ಘಾವಧಿಯವರೆಗೆ (10 ತಿಂಗಳುಗಳು) ಮೌನವಾಗಿರಲು ಯಾವುದೇ ಸಮಂಜಸ ಕಾರಣವಿರಲಿಲ್ಲ ಎಂದು ಮೇ 14ರಂದು ತನ್ನ ಆದೇಶದಲ್ಲಿ ಬೆಟ್ಟು ಮಾಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು,ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಿರುವಾಗ ಪ್ರಾಸಿಕ್ಯೂಷನ್ ಸಾಕ್ಷಿ ಜಹಾಂಗೀರ್ ಅವರಿಗೆ ಆರೋಪಿಗಳ ಛಾಯಾಚಿತ್ರಗಳನ್ನು ತೋರಿಸಿದ್ದು ಅಸ್ವಾಭಾವಿಕ ಕ್ರಮವಾಗಿ ಕಂಡುಬರುತ್ತದೆ ಮತ್ತು ಆರೋಪಿಗಳನ್ನು ಗುರುತಿಸಲು ಅವರನ್ನು ಕೃತಕವಾಗಿ ಪ್ರತ್ಯಕ್ಷದರ್ಶಿಯನ್ನಾಗಿ ಮಾಡಲಾಗಿತ್ತು ಎಂಬ ಭಾವನೆಯನ್ನುಂಟು ಮಾಡುತ್ತದೆ ಎಂದು ಹೇಳಿದರು. ಪೋಲಿಸರು ಆರೋಪಿಗಳನ್ನು ಗುರುತಿಸಿದ್ದು ವಿವಾದ ಮತ್ತು ಅನುಮಾನದಿಂದ ಹೊರತಾಗಿಲ್ಲ ಎಂದೂ ಅವರು ತಿಳಿಸಿದರು.

ಮುಹಮ್ಮದ್ ಇಮ್ರಾನ್ ಶೇಖ್ ಸಲ್ಲಿಸಿದ್ದ ದೂರಿನ ಆರೋಪದಲ್ಲಿ ಪ್ರಕರಣವು ದಾಖಲಾಗಿತ್ತು. ಗಲಭೆ ಸಂದರ್ಭದಲ್ಲಿ ಗೋಕುಲಪುರಿಯಲ್ಲಿಯ ತನ್ನ ‘ಕ್ರೌನ್ ಮೆಡಿಕೋಸ್’ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಲೂಟಿ ಮಾಡಲಾಗಿದೆ ಎಂದು ಶೇಖ್ ದೂರಿನಲ್ಲಿ ಆರೋಪಿಸಿದ್ದರು.

ದೂರುದಾರರ ಅಂಗಡಿಯನ್ನು ಸುಟ್ಟು ಲೂಟಿ ಮಾಡಿದ್ದನ್ನು ಛಾಯಾಚಿತ್ರಗಳು ಶಂಕಾತೀತವಾಗಿ ಸಾಬೀತುಗೊಳಿಸಿವೆ ಎಂದು ಹೇಳಿದ ನ್ಯಾಯಾಲಯವು, ಆದರೆ 12 ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ನೆಚ್ಚಿಕೊಂಡಿದ್ದ ಪೋಲಿಸರು ಆರೋಪಿಗಳನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದರು ಎಂದು ಬೆಟ್ಟು ಮಾಡಿತ್ತು.

ಆರೋಪಿಗಳ ವಿರುದ್ಧದ ಆರೋಪಗಳು ಶಂಕಾತೀತವಾಗಿ ಸಾಬೀತಾಗಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಾಲಯವು,ಅಂಕಿತ ಚೌಧರಿ, ಸುಮಿತ್, ಪಪ್ಪು, ವಿಜಯ, ಆಶಿಷ್ ಕುಮಾರ, ಸೌರಭ ಕೌಶಿಕ್, ಭೂಪೇಂದರ್, ಶಕ್ತಿಸಿಂಗ್, ಸಚಿನ್ ಕುಮಾರ್ , ರಾಹುಲ್ ಮತ್ತು ಯೋಗೇಶ್ ಅವರನ್ನು ಖುಲಾಸೆಗೊಳಿಸಿತು.

2020,ಫೆ.24ರಿಂದ ಫೆ.26ರವರೆಗೆ ರಾಷ್ಟ್ರ ರಾಜಧಾನಿಯನ್ನು ತಲ್ಲಣಗೊಳಿಸಿದ್ದ ಈಶಾನ್ಯ ದಿಲ್ಲಿ ಗಲಭೆಗಳಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು 500ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಕೋಟ್ಯಂತರ ರೂ.ಮೌಲ್ಯದ ಆಸ್ತಿಗಳಿಗೆ ಹಾನಿಯುಂಟಾಗಿತ್ತು. ಗಲಭೆ ಸಂಬಂಧ ಒಟ್ಟು 700 ಪ್ರಕರಣಗಳು ದಾಖಲಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News