2023 ಇತಿಹಾಸದ ಅತ್ಯಂತ ಬಿಸಿ ವರ್ಷ ; ಯುರೋಪ್‌ನ ವಿಜ್ಞಾನಿಗಳ ಎಚ್ಚರಿಕೆ
ಹೊಸದಿಲ್ಲಿ: ಈ ವರ್ಷದ ಅಕ್ಟೋಬರ್ ತಿಂಗಳು ಜಗತ್ತಿನ ಈವರೆಗಿನ ದಾಖಲಿತ ಇತಿಹಾಸದ ಅತ್ಯಂತ ಬಿಸಿ ತಿಂಗಳಾಗಿದ್ದು, 2023 ಅತ್ಯಂತ ಬಿಸಿ ವರ್ಷವಾಗಲಿದೆ ಎಂದು ಯುರೋಪ್‌ನ ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆಯ ವಿಜ್ಞಾನಿಗಳು ಬುಧವಾರ ಹೇಳಿದ್ದಾರೆ.
ಈಗಾಗಲೇ ಈ ವರ್ಷದ ಜೂನ್, ಜುಲೈ ಮತ್ತು ಸೆಪ್ಟಂಬರ್ ತಿಂಗಳುಗಳು ದಾಖಲಿತ ಇತಿಹಾಸದ ಅತ್ಯಂತ ಬಿಸಿ ತಿಂಗಳುಗಳಾಗಿ ದಾಖಲಾಗಿವೆ. ಜುಲೈ ತಿಂಗಳ ಮೊದಲ ಮತ್ತು ಮೂರನೇ ವಾರಗಳಲ್ಲಿ, ಜಾಗತಿಕ ಸರಾಸರಿ ಉಷ್ಣತೆಯು ತಾತ್ಕಾಲಿಕವಾಗಿ ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಹೆಚ್ಚುವರಿ 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನೂ ಮೀರಿತ್ತು.
ಕಲ್ಲಿದ್ದಲು, ತೈಲ ಮತ್ತು ಅನಿಲ ಸುಡುವುದು ಹಾಗೂ ಇತರ ಮಾನವ ಚಟುವಟಿಕೆಗಳು ಆರಂಭವಾಗುವ ಮೊದಲು ಜಗತ್ತಿನಲ್ಲಿದ್ದ ಸರಾಸರಿ ಉಷ್ಣತೆಗಿಂತ ಹೆಚ್ಚುವರಿಯಾಗಿ 1.5 ಡಿಗ್ರಿ ಸೆಲ್ಸಿಯಸ್‌ನೊಳಗೆ ಜಾಗತಿಕ ತಾಪಮಾನವನ್ನು ಮಿತಿಗೊಳಿಸಬೇಕೆಂದು ವಿಶ್ವಸಂಸ್ಥೆ ನಿರ್ಣಯಿಸಿದೆ. ಜಾಗತಿಕ ಸರಾಸರಿ ಉಷ್ಣತೆಯು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಹೆಚ್ಚುವರಿಯಾಗಿ 1.5 ಡಿಗ್ರಿ ಸೆಲ್ಸಿಯಸ್‌ನ್ನು ಮೀರಿದರೆ ಪದೇ ಪದೇ ತೀವ್ರ ಬರಗಾಲ, ಬಿಸಿ ಗಾಳಿ ಮತ್ತು ಅತಿವೃಷ್ಟಿ ಮುಂತಾದ ಭೀಕರ ಪ್ರಾಕೃತಿಕ ವಿಪತ್ತುಗಳಿಗೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ್‌ಸರಕಾರಿ ಸಮಿತಿ ಎಚ್ಚರಿಸಿದೆ.
2023 ಅಕ್ಟೋಬರ್ ತಿಂಗಳ ಸರಾಸರಿ ಉಷ್ಣತೆಯು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು ಎಂದು ಬುಧವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ವಿಜ್ಞಾನಿಗಳು ಹೇಳಿದ್ದಾರೆ.