×
Ad

ವೆರೋನಿಕಾ ಮಿಶೆಲ್ ಗೆ 2024ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ

Update: 2024-12-06 20:21 IST

ಹೊಸದಿಲ್ಲಿ : 2024ರ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಯನ್ನು ಚಿಲಿ ದೇಶದ ಮಾಜಿ ಅಧ್ಯಕ್ಷೆ ವೆರೋನಿಕಾ ಮಿಶೆಲ್ ಬಶಲೆಟ್ ಝೆರಿಯ ಅವರಿಗೆ ನೀಡಲಾಗಿದೆ. ಲಿಂಗ ಸಮಾನತೆ ಮತ್ತು ದುರ್ಬಲ ಸಮುದಾಯಗಳ ಹಕ್ಕುಗಳಿಗಾಗಿ ಮಾಡಿರುವ ಹೋರಾಟಗಳಿಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಅಂತರರಾಷ್ಟ್ರೀಯ ಆಯ್ಕೆ ಮಂಡಳಿಯು ಪ್ರಶಸ್ತಿ ವಿಜೇತರನ್ನು ಘೋಷಿಸಿದೆ. ಮಾಜಿ ವಿದೇಶ ಕಾರ್ಯದರ್ಶಿ ಹಾಗೂ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

‘‘ಜಗತ್ತಿನಾದ್ಯಂತದ ಮಹಿಳೆಯರು ಮತ್ತು ಪುರುಷರ ಆದರ್ಶ ಹಾಗೂ ಪ್ರೇರಣಾದಾಯಕ ವ್ಯಕ್ತಿಯಾಗಿರುವ ಮಿಶೆಲ್ ಬಶಲೆಟ್ ಅವರಿಗೆ 2024ರ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಯನ್ನು ನೀಡಲಾಗಿದೆ. ಅವರು ವಿವಿಧ ಸನ್ನಿವೇಶಗಳಲ್ಲಿ ಶಾಂತಿ, ಲಿಂಗ ಸಮಾನತೆ, ಮಾನವಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗಾಗಿ ದೃಢನಿರ್ಧಾರದ ಹೋರಾಟಗಳನ್ನು ಮಾಡಿದ್ದಾರೆ. ಅವರು ಭಾರತ ಮತ್ತು ಚಿಲಿ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ’’ ಎಂದು ಟ್ರಸ್ಟ್ ಹೇಳಿದೆ.

ಮಿಶೆಲ್ ಬಶಲೆಟ್ ‘ಯುಎನ್ ವಿಮೆನ್’ನ ಸ್ಥಾಪಕ ಸದಸ್ಯರ ಪೈಕಿ ಒಬ್ಬರಾಗಿದ್ದಾರೆ. ಅವರು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಅತ್ಯಂತ ದುರ್ಬಲ ಸಮುದಾಯಗಳ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದ್ದಾರೆ.

ಆಗಸ್ಟೊ ಪಿನೊಶೆಟ್ನ ಸೇನಾಡಳಿತದ ಅವಧಿಯಲ್ಲಿ ಬಶಲೆಟ್ರನ್ನು ಜೈಲಿಗೆ ಹಾಕಲಾಗಿತ್ತು. ಬಿಡುಗಡೆಯ ಬಳಿಕ ಅವರು ದೇಶಭ್ರಷ್ಟ ಜೀವನ ನಡೆಸಿದ್ದರು. ಬಳಿಕ ಅವರು ಚಿಲಿಗೆ ಮರಳಿ ದೇಶದ ಮೊದಲ ಮಹಿಳಾ ಅಧ್ಯಕ್ಷರಾದರು. ಅವರು ಮೊದಲು 2006ರಿಂದ 2010ರವರೆಗೆ ಮತ್ತು ಬಳಿಕ, 2014ರಿಂದ 2018ರವರೆಗೆ ಎರಡು ಅವಧಿಗೆ ದೇಶದ ಅಧ್ಯಕ್ಷೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News