ಬಿಹಾರ ಕರಡು ಮತದಾರರ ಪಟ್ಟಿ| ಎರಡು ವಾರಗಳಲ್ಲಿ 23,557 ಆಕ್ಷೇಪಣೆಗಳು ಸ್ವೀಕಾರ, ರಾಜಕೀಯ ಪಕ್ಷಗಳಿಂದ ಒಂದೂ ಇಲ್ಲ: ಚುನಾವಣಾ ಆಯೋಗ
23,557 claims & objections over Bihar draft voter list in 2 weeks: EC
ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯ ಬಳಿಕ ಕರಡು ಮತದಾರರ ಪಟ್ಟಿಗಳಿಗೆ ಸಂಬಂಧಿಸಿದಂತೆ ಒಟ್ಟೂ 23,557 ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 741 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಆಯೋಗದ ಪ್ರಕಾರ 14 ದಿನಗಳ ನಂತರವೂ ಯಾವುದೇ ರಾಜಕೀಯ ಪಕ್ಷವು ಹಕ್ಕು ಕೋರಿಕೆ ಅಥವಾ ಆಕ್ಷೇಪಣೆಯನ್ನು ಸಲ್ಲಿಸಿಲ್ಲ.
18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಹೊಸ ಮತದಾರರಿಂದ ಒಟ್ಟು 87,966 ನೋಂದಣಿ ಫಾರ್ಮ್‌ಗಳನ್ನು ಸ್ವೀಕರಿಸಲಾಗಿದ್ದು,ಇವುಗಳಲ್ಲಿ ಬೂತ್ ಮಟ್ಟದ ಏಜೆಂಟ್‌ಗಳು ಸಲ್ಲಿಸಿದ ಆರು ಫಾರ್ಮ್‌ಗಳು ಸೇರಿವೆ.
ನಿಯಮಗಳ ಪ್ರಕಾರ ಅರ್ಹತಾ ದಾಖಲೆಗಳ ಪರಿಶೀಲನೆಯ ಏಳು ದಿನಗಳ ಅವಧಿ ಮುಗಿದ ನಂತರ ಸಂಬಂಧಿತ ಚುನಾವಣಾ ನೋಂದಣಾಧಿಕಾರಿ(ಇಆರ್‌ಒ)/ಸಹಾಯಕ ಚುನಾವಣಾ ನೋಂದಣಾಧಿಕಾರಿ(ಎಇಆರ್‌ಒ) ದೂರುಗಳನ್ನು ವಿಲೇವಾರಿ ಮಾಡಬೇಕು.
ಎಸ್‌ಐಆರ್ ಆದೇಶಗಳ ಪ್ರಕಾರ,ಆ.1, 2025ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ಇಆರ್‌ಒ-ಎಇಆರ್‌ಒ ಆದೇಶವನ್ನು ಹೊರಡಿಸದೆ ಅಳಿಸುವಂತಿಲ್ಲ. ವಿಚಾರಣೆಯನ್ನು ನಡೆಸಿದ ಮತ್ತು ಅಹವಾಲು ಹೇಳಿಕೊಳ್ಳಲು ನ್ಯಾಯಯುತ ಮತ್ತು ಸಮಂಜಸ ಅವಕಾಶವನ್ನು ನೀಡಿದ ಬಳಿಕ ಅವರು ಆದೇಶವನ್ನು ಹೊರಡಿಸಬಹುದು.
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಲಾಗಿರುವ ಒಂದು ತಿಂಗಳ ಅವಧಿಯು ಮುಗಿದ ಬಳಿಕ ಅಂತಿಮ ಮತದಾರರ ಪಟ್ಟಿಗಳನ್ನು ಬಿಡುಗಡೆಗೊಳಿಸಲಾಗುವುದು.