"ಭಾರತವನ್ನು ಅವಹೇಳನ ಮಾಡಬೇಡಿ": ಜಾಗತಿಕ ಜಿಡಿಪಿ ಅಂದಾಜಿಗೆ ಮಸ್ಕ್ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ರಿಜಿಜು ದಾಳಿ
ಕಿರೆನ್ ರಿಜಿಜು , ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: 2026ರ ಜಾಗತಿಕ ಜಿಡಿಪಿಗೆ ಭಾರತವು ಎರಡನೇ ಅತಿದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ಅಂದಾಜಿಸಿರುವ ಜಾಗತಿಕ ಅಂಕಿಅಂಶಗಳ ವರದಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಳಿ ನಡೆಸಿದ್ದಾರೆ. ಸರಕಾರವನ್ನು ಟೀಕಿಸುವ ಭರದಲ್ಲಿ ಭಾರತದ ಅವಹೇಳನ ಮಾಡಬೇಡಿ ಎಂದು ರಾಹುಲ್‌ರನ್ನು ಆಗ್ರಹಿಸಿದ್ದಾರೆ.
ಮಸ್ಕ್ ತನ್ನ ರವಿವಾರದ ಪೋಸ್ಟ್‌ನಲ್ಲಿ ‘ಶಕ್ತಿಯ ಸಮತೋಲನ ಬದಲಾಗುತ್ತಿದೆ’ ಎಂದು ಬರೆದಿದ್ದರು. ‘ಜಾಗತಿಕ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಶೇ.43.6ರಷ್ಟು ಕೊಡುಗೆ ನೀಡುತ್ತಿವೆ’ ಎಂಬ @stats_feed ನ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು.
ಭಾರತದ ಆರ್ಥಿಕತೆ ಸತ್ತಿದೆ ಎಂದು ಪುನರುಚ್ಚರಿಸಿದ್ದು ಮತ್ತು 2026-27ರ ಕೇಂದ್ರ ಬಜೆಟ್‌ಗೆ ಆಕ್ಷೇಪಣೆಗಳು ಸೇರಿದಂತೆ ಬಿಜೆಪಿ ನೇತೃತ್ವದ ಸರಕಾರವು ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಕುರಿತು ರಾಹುಲ್‌ರ ನಿರಂತರ ಟೀಕೆಗಳ ನಡುವೆ ರಿಜಿಜು ಅವರ ಹೇಳಿಕೆಗಳು ಹೊರಬಿದ್ದಿವೆ.
ರಾಷ್ಟ್ರದ ಸಾಧನೆಯನ್ನು ಎತ್ತಿ ತೋರಿಸಲು ಮಾತ್ರ ತಾನು ಮಸ್ಕ್ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ ಎಂದು ಎಕ್ಸ್‌ನಲ್ಲಿ ಬರೆದಿರುವ ರಿಜಿಜು,‘ನಾನು ಸಾಮಾನ್ಯವಾಗಿ ಭಾರತೀಯರಲ್ಲದವರು ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸರಕಾರವನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕು,ಆದರೆ ಭಾರತವನ್ನು ಅವಮಾನಿಸಬೇಡಿ ಮತ್ತು ಭಾರತದ ಸಾಧನೆಯನ್ನು ಕೀಳಾಗಿ ನೋಡಬೇಡಿ. ಹೆಮ್ಮೆಯ ಭಾರತೀಯರಾಗಿ ಎಂದು ರಾಹುಲ್ ಗಾಂಧಿಯವರಿಗೆ ತಿಳಿಸಲು ಮಾತ್ರ ನಾನು ಮಸ್ಕ್ ಪೋಸ್ಟ್‌ನ್ನು ಉಲ್ಲೇಖಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಮಸ್ಕ್ ಹಂಚಿಕೊಂಡಿರುವ ಪೋಸ್ಟ್ ಐಎಂಎಫ್ ದತ್ತಾಂಶಗಳನ್ನು ಉಲ್ಲೇಖಿಸಿ ಅಗ್ರ 10 ದೇಶಗಳನ್ನು ಮತ್ತು 2026ರಲ್ಲಿ ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಅವುಗಳ ನಿರೀಕ್ಷಿತ ಕೊಡುಗೆಗಳನ್ನು ಪಟ್ಟಿ ಮಾಡಿದೆ. ಜೊತೆಗೆ,ಏಷ್ಯಾ-ಪೆಸಿಫಿಕ್ ಪ್ರದೇಶವು ಒಟ್ಟು ಜಾಗತಿಕ ಬೆಳವಣಿಗೆಯಲ್ಲಿ ಸುಮಾರು ಶೇ.50ರಷ್ಟು ಪಾಲನ್ನು ಹೊಂದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಪಟ್ಟಿಯಲ್ಲಿ ಭಾರತವು ಶೇ.17ರಷ್ಟು ಜಿಡಿಪಿ ಕೊಡುಗೆ ಅಂದಾಜಿನೊಂದಿಗೆ ಅಮೆರಿಕಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಇಂಡೋನೇಶ್ಯಾ,ಅಮೆರಿಕ,ಚೀನಾ ಮತ್ತು ಜರ್ಮನಿ ಅನುಕ್ರಮವಾಗಿ ಶೇ.3.8,ಶೇ.9.9,ಶೇ.26.6 ಮತ್ತು ಶೇ.0.9 ರಷ್ಟು ಕೊಡುಗೆಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಈ ವರ್ಷದ ಜನವರಿಯಲ್ಲಿ ಐಎಂಎಫ್ 2025-26ರ ವಿತ್ತವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇ.7.3ಕ್ಕೆ ಮತ್ತು 2026-27ಕ್ಕೆ ಶೇ.6.4ಕ್ಕೆ ಹೆಚ್ಚಿಸಿತ್ತು.