×
Ad

ದೇಶದಾದ್ಯಂತ ಶೇ. 28ಷ್ಟು ಹಾಲಿ ಮಹಿಳಾ ಶಾಸನಸಭೆ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳು: ADR ವರದಿ

Update: 2025-04-30 20:18 IST

PC : PTI 

ಹೊಸದಿಲ್ಲಿ: ದೇಶಾದ್ಯಂತ ಇರುವ ಶೇ. 28ರಷ್ಟು ಮಹಿಳಾ ಶಾಸನಸಭೆ ಸದಸ್ಯರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, 17 ಮಂದಿ ಶಾಸಕಿ ಹಾಗೂ ಸಂಸದೆಯರು ತಾವು ಕೋಟ್ಯಧಿಪತಿಗಳು ಎಂದು ಘೋಷಿಸಿಕೊಂಡಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ADR ನಡೆಸಿರುವ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ.

ಚುನಾವಣಾ ಆಯೋಗಕ್ಕೆ 513 ಮಂದಿ ಹಾಲಿ ಮಹಿಳಾ ಸಂಸದೆಯರು ಹಾಗೂ ಶಾಸಕಿಯರ ಪೈಕಿ 512 ಮಂದಿ ಹಾಲಿ ಶಾಸಕಿ ಹಾಗೂ ಸಂಸದೆಯರು ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಆಧರಿಸಿ, ಈ ಪೈಕಿ ಶೇ. 28ರಷ್ಟು ಹಾಲಿ ಮಹಿಳಾ ಸಂಸದೆಯರು ಹಾಗೂ ಶಾಸಕಿಯರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ADR ವರದಿಯಲ್ಲಿ ಹೇಳಲಾಗಿದೆ.

ಈ ಪೈಕಿ, 75 ಮಂದಿ ಲೋಕಸಭಾ ಮಹಿಳಾ ಸಂಸದೆಯರ ಪೈಕಿ 24 ಮಹಿಳಾ ಸಂಸದೆಯರು (ಶೇ. 32), 37 ಮಂದಿ ರಾಜ್ಯಸಭಾ ಮಹಿಳಾ ಸಂಸದೆಯರ ಪೈಕಿ 10 ಮಂದಿ ಮಹಿಳಾ ಸಂಸದೆಯರು (ಶೇ. 27) ಹಾಗೂ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 400 ಮಂದಿ ಶಾಸಕಿಯರ ಪೈಕಿ 109 ಮಂದಿ ಮಹಿಳಾ ಶಾಸಕಿಯರು (ಶೇ. 27) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ. ಅಲ್ಲದೆ, ಈ ಪೈಕಿ, 78 ಮಂದಿ ಮಹಿಳಾ ಶಾಸನಸಭಾ ಸದಸ್ಯೆಯರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದೂ ಘೋಷಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೆಲವು ನಿರ್ದಿಷ್ಟ ರಾಜ್ಯಗಳ ಮಹಿಳಾ ಶಾಸನಸಭಾ ಸದಸ್ಯೆಯರ ವಿರುದ್ಧ ಅಧಿಕ ಪ್ರಮಾಣದ ಕ್ರಿಮಿನಲ್ ಪ್ರಕರಣಗಳಿರುವುದೂ ಈ ವಿಶ್ಲೇಷಣೆಯಲ್ಲಿ ಕಂಡು ಬಂದಿದೆ.

ಈ ವರದಿಯ ಪ್ರಕಾರ, ಗೋವಾದ ಮೂವರು ಸಂಸದೆಯರು/ಶಾಸಕಿಯರ ಪೈಕಿ ಇಬ್ಬರು (ಶೇ. 67), ತೆಲಂಗಾಣದ 12 ಮಂದಿ ಮಹಿಳಾ ಸಂಸದೆಯರು/ಶಾಸಕರ ಪೈಕಿ ಎಂಟು ಮಂದಿ (ಶೇ. 67), ಆಂಧ್ರಪ್ರದೇಶದ 24 ಮಂದಿ ಮಹಿಳಾ ಸಂಸದೆಯರು/ಶಾಸಕಿಯರ ಪೈಕಿ ಏಳು ಮಂದಿ (ಶೇ. 50), ಪಂಜಾಬ್‌ನ 14 ಮಂದಿ ಮಹಿಳಾ ಸಂಸದೆಯರು/ಶಾಸಕಿಯರ ಪೈಕಿ ಏಳು ಮಂದಿ (ಶೇ. 50), ಕೇರಳದ 14 ಮಂದಿ ಮಹಿಳಾ ಸಂಸದೆಯರು/ಶಾಸಕಿಯರ ಪೈಕಿ ಏಳು ಮಂದಿ ಹಾಗೂ ಬಿಹಾರದ 35 ಮಂದಿ ಮಹಿಳಾ ಸಂಸದೆಯರು/ಶಾಸಕಿಯರ ಪೈಕಿ ಹದಿನೈದು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ತಮ್ಮ ಸ್ವಯಂ ಪ್ರಮಾಣ ಪತದಲ್ಲಿ ಘೋಷಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News