ಎಲ್‌ಒಸಿ, ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ; ಮೂವರು ನಾಗರಿಕರು ಮೃತ್ಯು
ಹೊಸದಿಲ್ಲಿ: ಬುಧವಾರ ಮುಂಜಾನೆ, ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಹಲವಾರು ಠಾಣೆಗಳಿಂದ ಫಿರಂಗಿ ಶೆಲ್ ದಾಳಿ ನಡೆಸಿತು.
ಅಪ್ರಚೋದಿತ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
"ಮೇ 06-07, 2025 ರ ರಾತ್ರಿ, ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ, ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿನ ತನ್ನ ಠಾಣೆಗಳಿಂದ ಫಿರಂಗಿ ಶೆಲ್ ದಾಳಿ ಸೇರಿದಂತೆ ಅನಿಯಂತ್ರಿತ ಗುಂಡಿನ ದಾಳಿ ನಡೆಸಿತು. ಶೆಲ್ ದಾಳಿಯಲ್ಲಿ ಮೂವರು ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡರು. ಭಾರತೀಯ ಸೇನೆ ಇದಕ್ಕೆ ತಕ್ಕದಾದ ಪ್ರತಿಕ್ರಿಯೆ ನೀಡುತ್ತಿದೆ," ಎಂದು ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂಧೂರ್' ಅನ್ನು ಕಾರ್ಯಾಚರಣೆಯನ್ನು ಭಾರತ ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಈ ಗುಂಡಿನ ದಾಳಿ ನಡೆದಿದೆ.
ಎಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ.