10ರಲ್ಲಿ 4 ಮಂದಿ ಮಧುಮೇಹಿಗಳಿಗೆ ರೋಗದ ಅರಿವೇ ಇಲ್ಲ: ವರದಿ
ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ಭಾರತದಲ್ಲಿ ಪ್ರತಿ 10 ಮಂದಿ ಮಧುಮೇಹಿಗಳ ಪೈಕಿ ನಾಲ್ಕು ಮಂದಿಗೆ ತಮಗೆ ಈ ರೋಗ ಇದೆ ಎಂಬ ಅರಿವೇ ಇಲ್ಲ ಎಂದು ಇತ್ತೀಚೆಗೆ ಬಿಡುಗಡೆ ಮಾಡಿರುವ ಲ್ಯಾನ್ಸೆಟ್ ಜಾಗತಿಕ ಆರೋಗ್ಯ ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಭಾರತದಲ್ಲಿ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ 57,180 ಮಂದಿಯನ್ನು 2017 ರಿಂದ 2019ರ ಅವಧಿಯಲ್ಲಿ ಸಮೀಕ್ಷೆಗೆ ಒಳಪಡಿಸಿ ನಡೆಸಿದ ಅಧ್ಯಯನದಿಂದ ಈ ಅಭಿಪ್ರಾಯಕ್ಕೆ ಬರಲಾಗಿದೆ. ದೇಶದಲ್ಲಿ 45 ವರ್ಷಕ್ಕಿಂತ ಹೆಚ್ಚಿನವರಲ್ಲಿ ಶೇಕಡ 20ರಷ್ಟು ಮಂದಿಗೆ ಮಧುಮೇಹ ರೋಗ ಇದೆ ಎನ್ನುವುದನ್ನು ವರದಿ ಬಹಿರಂಗಪಡಿಸಿದೆ. ಪುರುಷರು ಹಾಗೂ ಮಹಿಳೆಯರಲ್ಲಿ ಸಮಪ್ರಮಾಣದಲ್ಲಿ ಮಧುಮೇಹ ಸಮಸ್ಯೆ ಇದೆ ಎಂದು ಹೇಳಲಾಗಿದೆ.
ನಗರ ಪ್ರದೇಶಗಳಲ್ಲಿ ಮಧುಮೇಹ ಪ್ರಮಾಣ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ದುಪ್ಪಟ್ಟು ಇರುವುದು ಅಧ್ಯಯನದಿಂದ ದೃಢಪಟ್ಟಿದ್ದು, ಇದು ನಗರ ಹಾಗೂ ಗ್ರಾಮೀಣ ಜೀವನಶೈಲಿ ಮತ್ತು ತಿನ್ನುವ ಹವ್ಯಾಸದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಿದೆ. ಮುಂಬೈನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್ ಮತ್ತು ಮಿಚಿಗನ್, ಹಾರ್ವರ್ಡ್ ವಿವಿಯ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಜಂಟಿಯಾಗಿ ಈ ಅಧ್ಯಯನ ನಡೆಸಿದ್ದವು. ದೇಶದಲ್ಲಿ ಮಧ್ಯವಯಸ್ಸಿನ ಜನರಲ್ಲಿ ಮಧುಮೇಹ ತಡೆ, ಪತ್ತೆ, ನಿರ್ವಹಣೆ ಮತ್ತು ನಿಯಂತ್ರಣಕ್ಕೆ ನೀತಿಗಳನ್ನು ಜಾರಿಗೊಳಿಸುವಂತೆ ವರದಿ ಸಲಹೆ ಮಾಡಿದೆ.
ಭಾರತ ವಿಶ್ವದಲ್ಲೇ ಅತ್ಯಧಿಕ ಮಧುಮೇಹಿಗಳನ್ನು ಹೊಂದಿರುವ ಎರಡನೇ ದೇಶವಾಗಿದ್ದು, 2019ರಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು ಸಾವುಗಳ ಪೈಕಿ ಶೇಕಡ 3ರಷ್ಟು ಮಂದಿ ಮಧುಮೇಹದ ಕಾರಣದಿಂದ ಸಾವಿಗೀಡಾಗಿದ್ದಾರೆ. ಹೈಪರ್ಟ ಟೆನ್ಷನ್ ಮತ್ತು ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಕೂಡಾ ಅಧಿಕವಾಗಿದೆ ಎಂದು ವರದಿ ವಿವರಿಸಿದೆ.