×
Ad

ಅಸ್ಸಾಂ ಗಣಿ ದುರಂತ: 44 ದಿನಗಳ ಬಳಿಕ ಕಾರ್ಯಾಚರಣೆ ಪೂರ್ಣ; ಐವರು ಕಾರ್ಮಿಕರ ಮೃತದೇಹ ಪತ್ತೆ

Update: 2025-02-20 13:33 IST

Photo credit: PTI

ಡಿಸ್ಪುರ್:‌ ಜನವರಿ ಆರಂಭದಲ್ಲಿ ಅಸ್ಸಾಂನ ದಿಮಾ ಹಸಾವೊದಲ್ಲಿ ಪ್ರವಾಹಕ್ಕೆ ಸಿಲುಕಿ ಕಲ್ಲಿದ್ದಲು ಗಣಿಯಲ್ಲಿ ಸಾವನ್ನಪ್ಪಿದ್ದ ಐವರು ಕಾರ್ಮಿಕರ ಮೃತದೇಹಗಳನ್ನು ಬುಧವಾರ ಹೊರತೆಗೆಯಲಾಗಿದ್ದು, 44 ದಿನಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ.

ಜನವರಿ 6 ರಂದು, ದಿಮಾ ಹಸಾವೊದ ಉಮ್ರಾಂಗ್ಸೊ ಕಲ್ಲಿದ್ದಲು ಗಣಿಯಲ್ಲಿ ಒಂಬತ್ತು ಗಣಿಗಾರರು ಕೆಲಸ ಮಾಡುತ್ತಿದ್ದಾಗ ಪ್ರವಾಹಕ್ಕೆ ತುತ್ತಾಗಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್), ರಾಜ್ಯ ಡಿಆರ್‌ಎಫ್, ನೌಕಾಪಡೆ ಮತ್ತು ಸೇನೆಯ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಂಡಿತ್ತು.

ರಕ್ಷಣಾ ಕಾರ್ಯಾಚರಣೆಯ ಎರಡು ದಿನಗಳ ನಂತರ ಮೊದಲ ಮೃತದೇಹ ಪತ್ತೆಯಾಗಿದ್ದರೆ, ಮೂರು ದಿನಗಳ (ಜನವರಿ 11) ನಂತರ ಇನ್ನೂ ಮೂರು ಪತ್ತೆಯಾಗಿತ್ತು. ಅಂದಿನಿಂದ ಕಾರ್ಯಾಚರಣೆಗಳು ಮುಂದುವರಿದಿದ್ದರೂ, ಬುಧವಾರದವರೆಗೆ ಉಳಿದ ಯಾವುದೇ ಮೃತದೇಹಗಳು ಪತ್ತೆಯಾಗಿರಲಿಲ್ಲ.

ಪ್ರವಾಹದಿಂದಾಗಿ ಗಣಿಯೊಳಗೆ ತುಂಬಿದ್ದ ನೀರನ್ನು ಹೊರ ತೆಗೆಯುವುದೇ ರಕ್ಷಣಾ ಪಡೆಗಳಿಗೆ ಭಾರೀ ಸವಾಲಾಗಿತ್ತು. ಪ್ರತಿ ಗಂಟೆಗೆ 5 ಲಕ್ಷ ಲೀಟರ್ ನೀರನ್ನು ಗಣಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಗಿತ್ತು.

ಮೃತರನ್ನು ಗಂಗಾ ಬಹದ್ದೂರ್ ಶ್ರೇಷ್ಠ್ (38), ಹುಸೇನ್ ಅಲಿ (30), ಜಾಕಿರ್ ಹುಸೇನ್ (38), ಸರ್ಪಾ ಬರ್ಮನ್ (46), ಮುಸ್ತಫಾ ಶೇಖ್ (44), ಖುಸಿ ಮೋಹನ್ ರೈ (57), ಸಂಜಿತ್ ಸರ್ಕಾರ್ (35), ಲಿಜನ್ ಮಗರ್ (26) ಮತ್ತು ಶರತ್ ಗೊಯಾರಿ (37) ಎಂದು ಗುರುತಿಸಲಾಗಿದೆ. ಇವರಲ್ಲಿ, ಗಂಗಾ ಬಹಾದ್ದೂರ್ ಶ್ರೇಷ್ಠ್ ನೇಪಾಳದವರಾಗಿದ್ದು, ಸಂಜಿತ್‌ ಸರ್ಕಾರ್ ಪಶ್ಚಿಮ ಬಂಗಾಳದವರಾಗಿದ್ದಾರೆ. ಉಳಿದವರು ಅಸ್ಸಾಂನ ರಾಜ್ಯದವರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News