×
Ad

ರಷ್ಯಾ ಸೇನೆಯಲ್ಲಿರುವ 44 ಭಾರತೀಯರ ಬಿಡುಗಡೆಯನ್ನು ಕೋರಿದ್ದೇವೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

Update: 2025-11-08 16:31 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರಸ್ತುತ 44 ಭಾರತೀಯ ಪ್ರಜೆಗಳು ರಷ್ಯದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ತಾನು ಅಲ್ಲಿಯ ಸರಕಾರವನ್ನು ಆಗ್ರಹಿಸಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು(ಎಂಇಎ) ತಿಳಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ ಜೈಸ್ವಾಲ್ ಅವರು, ‘ನಾವು ರಷ್ಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಈ ಭಾರತೀಯರ ಕುಟುಂಬಗಳೊಂದಿಗೂ ಸಂಪರ್ಕದಲ್ಲಿದ್ದು, ಅವರಿಗೆ ಈ ವಿಷಯದಲ್ಲಿ ಪ್ರಗತಿಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ಹೇಳಿದರು.

ತನ್ನ ಸಶಸ್ತ್ರ ಪಡೆಗಳಲ್ಲಿ ಭಾರತೀಯರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆಯೂ ಭಾರತ ಸರಕಾರವು ರಷ್ಯವನ್ನು ಆಗ್ರಹಿಸಿದೆ ಎಂದರು.

‘ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ಒಡ್ಡಲಾಗುತ್ತಿರುವ ಆಮಿಷಗಳಿಂದ ದೂರವಿರುವಂತೆ ನಾವು ಎಲ್ಲರಿಗೆ ಮತ್ತೊಮ್ಮೆ ತಿಳಿಸುತ್ತಿದ್ದೇವೆ,ಏಕೆಂದರೆ ಇವು ಜೀವಕ್ಕೆ ಅಪಾಯವನ್ನುಂಟು ಮಾಡುವ ಆಮಿಷಗಳಾಗಿವೆ’ ಎಂದ ಜೈಸ್ವಾಲ್,ನಾವು ಪದೇ ಪದೇ ನೆನಪಿಸಿದ್ದರೂ ಜನರು ರಷ್ಯಾದ ಸೇನೆಗೆ ಸೇರ್ಪಡೆಗೊಳ್ಳುತ್ತಲೇ ಇದ್ದಾರೆ’ ಎಂದು ಹೇಳಿದರು.

ಈ ಹಿಂದೆಯೂ ಭಾರತದಲ್ಲಿ ಕಾನೂನು ಜಾರಿ ಸಂಸ್ಥೆಗಳು ವಂಚಕ ಏಜೆಂಟರ ವಿರುದ್ಧ ಕ್ರಮ ಕೈಗೊಂಡಿವೆ ಮತ್ತು ಜನರು ಅವರಿಂದ ಮೋಸ ಹೋಗದಂತೆ ನೋಡಿಕೊಳ್ಳಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಿವೆ ಎಂದರು.

ಎಂಇಎ ರಷ್ಯಾದ ಸೇನೆಯನ್ನು ಸೇರದಂತೆ ಭಾರತೀಯ ನಾಗರಿಕರಿಗೆ ಹಲವಾರು ಸಲ ಸೂಚಿಸಿದೆ. ಅನೇಕರು ವಂಚಕ ಏಜಂಟ್‌ಗಳಿಂದ ಮೋಸ ಹೋಗುತ್ತಾರೆ ಮತ್ತು ಅವರನ್ನು ಹೆಚ್ಚಾಗಿ ಅಡುಗೆಯವರು ಮತ್ತು ಸಹಾಯಕರಂತಹ ಸಿಬ್ಬಂದಿಗಳಾಗಿ ನೇಮಿಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರಕಾರವು ಪ್ರತಿಪಾದಿಸಿದೆ.

ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರವು ಆಗ ರಷ್ಯಾದ ಸೇನೆಗೆ ಸೇರ್ಪಡೆಗೊಂಡಿದ್ದ 27 ಭಾರತೀಯರನ್ನು ತಕ್ಷಣವೇ ಬಿಡುಗಡೆಗೊಳಿಸಿ ತಾಯ್ನಾಡಿಗೆ ವಾಪಸ್ ಕಳುಹಿಸುವಂತೆ ಅಲ್ಲಿಯ ಸರಕಾರವನ್ನು ಆಗ್ರಹಿಸಿತ್ತು ಎಂದು ಜೈಸ್ವಾಲ್ ತಿಳಿಸಿದರು.

ರಷ್ಯಾದ ಸೇನೆಯನ್ನು ಸೇರಿದ್ದ ಕೇರಳದ ವ್ಯಕ್ತಿಯು ಮೃತಪಟ್ಟ ಬಳಿಕ ಜನವರಿಯಲ್ಲಿ ಸಚಿವಾಲಯವು ಅದನ್ನು ಸೇರುವುದರ ವಿರುದ್ಧ ಭಾರತೀಯ ನಾಗರಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿತ್ತು ಎಂದು ಅವರು ಹೇಳಿದರು.

ರಷ್ಯಾದ ಸಶಸ್ತ್ರ ಪಡೆಗಳಲ್ಲಿ 127 ಭಾರತೀಯ ನಾಗರಿಕರಿದ್ದು, ಎರಡೂ ಸರಕಾರಗಳ ನಡುವೆ ನಿರಂತರ ಮಾತುಕತೆಗಳ ಪರಿಣಾಮ 98 ಜನರು ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದಾರೆ ಎಂದು ಜುಲೈನಲ್ಲಿ ಎಂಇಎ ರಾಜ್ಯಸಭೆಯಲ್ಲಿ ತಿಳಿಸಿತ್ತು.

ದಿಲ್ಲಿಯಲ್ಲಿಯ ರಷ್ಯದ ರಾಯಭಾರ ಕಚೇರಿಯ ಪ್ರಕಾರ ಆ ದೇಶದ ರಕ್ಷಣಾ ಸಚಿವಾಲಯವು ಎಪ್ರಿಲ್ 2024ರಿಂದ ಭಾರತೀಯರ ನೇಮಕಾತಿಯನ್ನು ನಿಲ್ಲಿಸಿದೆ,ಆದಾಗ್ಯೂ ಮಿಲಿಟರಿ ಸೇವೆಗಳೊಂದಿಗಿನ ಒಪ್ಪಂದಗಳು ಹಲವಾರು ಭಾರತೀಯರ ಬಿಡುಗಡೆಯನ್ನು ವಿಳಂಬಗೊಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News