ಬಿಹಾರ ಗ್ರಾಮದ ಐವರು ಮತದಾರರು ಮತದಾರ ಪಟ್ಟಿಯಲ್ಲಿ ‘ಮೃತ’ರೆಂದು ದಾಖಲು!
Photo : ndtv
ಪಾಟ್ನಾ,ಅ.11: ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಇನ್ನೂ ಒಂದು ತಿಂಗಳಿಗೂ ಕಡಿಮೆ ಅವಧಿ ಇರುವಾಗಲೇ ಆ ರಾಜ್ಯದ ಗ್ರಾಮವೊಂದರ ಕನಿಷ್ಠ ಐದು ಮಂದಿ ನಿವಾಸಿಗಳನ್ನು ಕರಡು ಮತದಾರಪಟ್ಟಿಯಲ್ಲಿ ಮೃತಪಟ್ಟಿದ್ದಾರೆಂದು ಗುರುತಿಸಿರುವುದು ಬೆಳಕಿಗೆ ಬಂದಿದೆ.
ಶುಕ್ರವಾರದಂದು ಬಸ್ತಾರ್ ಗ್ರಾಮದ ದೊರೈಯಾ ಬ್ಲಾಕ್ ನ ಮತಗಟ್ಟೆ ಸಂಖ್ಯೆ 216ರ ವ್ಯಾಪ್ತಿಗೆ ಬರುವ ಐವರು ನಿವಾಸಿಗಳು ಬಿಡಿಓ ಅರವಿಂದ್ ಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದು, ‘ಸರ್ ನಾವು ಜೀವಂತವಿದ್ದೇವೆ’ ಎಂದು ಹೇಳಿದ್ದಾರೆ.
ಸಂತ್ರಸ್ತ ಮತದಾರರನ್ನು ಮೋಹನ್ ಸಾಹ್ (ಸರಣಿ ಸಂಖ್ಯೆ 2), ಸಂಜಯ್ ಯಾದವ್ (ಸರಣಿ ಸಂಖ್ಯೆ 175), ರಾಮರೂಪ ಯಾದವ್ (ಸರಣಿ ಸಂಖ್ಯೆ 211), ನರೇಂದ್ರ ಕುಮಾರ್ ದಾಸ್ (ಸರಣಿ ಸಂಖ್ಯೆ 364) ಹಾಗೂ ವಿಷ್ಣುವರ್ ಪ್ರಸಾದ್ (ಸರಣಿ ಸಂಖ್ಯೆ 380) ಎಂದು ಗುರುತಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಇಂದ್ರದೇವ್ ಮಂಡಲ್ ನೇತೃತ್ವದಲ್ಲಿ ಬಿಡಿಓ ಅವರಿಗೆ ದೂರು ನೀಡಿದ ಐವರು ನಿವಾಸಿಗಳು, ಈ ತಪ್ಪಿನಿಂದಾಗಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ತಮಗೆ ಸಾಧ್ಯವಾಗದೆ ಇರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಐವರು ನಿವಾಸಿಗಳ ಆಹವಾಲನ್ನು ಸ್ವೀಕರಿಸಿದ ಬಿಡಿಓ ಕುಮಾರ್ ಅವರು, ಫಾರಂ ಸಂಖ್ಯೆ 6ನ್ನು ಭರ್ತಿ ಮಾಡುವಂತೆ ಅವರಿಗೆ ಸೂಚಿಸಿದರು ಹಾಗೂ ಮತದಾರಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆಗೊಳಿಸಲು ಆದೇಶಿಸಿದರು.
ಚಂಪಾರಣ್ ಜಿಲ್ಲೆಯ ಬಾಗಾಹಿ ಪಂಚಾಯತ್ನ ಡುಮ್ರಿ ಗ್ರಾಮದಲ್ಲಿ 15 ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆಂದು ನಮೂದಿಸಲಾಗಿತ್ತು.ಆದರೆ ಅದೇ ಮತದಾರ ಪಟ್ಟಿಯಲ್ಲಿ 2018ರಲ್ಲಿ ಸಾವನ್ನಪ್ಪಿದ ಸೋನಿಯಾ ಶಾರನ್ ಹಾಗೂ 2025ರಲ್ಲಿ ಮೃತಪಟ್ಟ ಆಕೆಯ ಪುತ್ರ ಮನೀತ್ ಮಣಿ ಅವರನ್ನು ಅರ್ಹ ಮತದಾರರೆಂದು ತಪ್ಪಾಗಿ ನಮೂದಿಸಲಾಗಿತ್ತು. 2016ನೇ ಇಸವಿಗಿಂತ ಮೊದಲೇ ಸಾವನ್ನಪ್ಪಿದವರು ಹೆಸರು ಕೂಡಾ ಮತದಾರ ಪಟ್ಟಿಯಲ್ಲಿ ಉಳಿದುಕೊಂಡಿರುವುದಾಗಿ ವರದಿಯಾಗಿದೆ.