ತಾಯಿಯ ಎದುರೇ ಐದು ವರ್ಷದ ಬಾಲಕನ ಶಿರಚ್ಛೇದ; ಹಂತಕನನ್ನು ಥಳಿಸಿ ಕೊಂದ ಸ್ಥಳೀಯರು
ಮೃತ ಬಾಲಕ ವಿಕಾಸ್ (Photo: NDTV)
ಧಾರ್: ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯೋರ್ವ ಐದರ ಹರೆಯದ ಪುಟ್ಟ ಬಾಲಕನನ್ನು ಆತನ ತಾಯಿಯೇ ಎದುರೇ ಶಿರಚ್ಛೇದನಗೈದ ಭೀಕರ ಘಟನೆ ಶುಕ್ರವಾರ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ವಿಕಾಸ್ ಮೃತ ಬಾಲಕ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್‌ನಲ್ಲಿ ಬಂದಿದ್ದ ಮಹೇಶ(25) ಎಂಬಾತ ಕಾಲೂ ಸಿಂಗ್ ಅವರ ಮನೆಗೆ ನುಗ್ಗಿದ್ದು, ಆತನನ್ನು ಕುಟುಂಬದವರು ಹಿಂದೆಂದೂ ನೋಡಿರಲಿಲ್ಲ. ಒಂದೂ ಮಾತನಾಡದ ಆತ ಅಲ್ಲಿದ್ದ ಸಲಿಕೆಯಂತಹ ಹರಿತವಾದ ಸಾಧನವನ್ನು ಎತ್ತಿಕೊಂಡು ಅಲ್ಲಿಯೇ ನಿಂತಿದ್ದ ಬಾಲಕನ ಮೇಲೆ ದಾಳಿ ನಡೆಸಿದ್ದಾನೆ. ಹೊಡೆತ ರಭಸಕ್ಕೆ ರುಂಡ ಮತ್ತು ಮುಂಡ ಪ್ರತ್ಯೇಕಗೊಂಡಿದ್ದು, ಬಳಿಕ ಭುಜಕ್ಕೂ ಸಲಿಕೆಯಿಂದ ಹೊಡೆದಿದ್ದ. ಪರಿಣಾಮ ಬಾಲಕನ ಶರೀರ ಛಿದ್ರವಿಚ್ಛಿದ್ರಗೊಂಡಿತ್ತು.
ವಿಕಾಸನನ್ನು ರಕ್ಷಿಸಲು ಹತಾಶ ಪ್ರಯತ್ನ ಮಾಡಿದ್ದ ತಾಯಿಯೂ ಗಾಯಗೊಂಡಿದ್ದಾಳೆ. ಕಣ್ಣೆದುರೇ ನಡೆದ ಘಟನೆಯಿಂದ ತೀವ್ರ ಆಘಾತಗೊಂಡಿದ್ದ ಆಕೆಯ ಆಕ್ರಂದನ ಕೇಳಿ ಧಾವಿಸಿ ಬಂದ ನೆರೆಕರೆಯವರು ಮಹೇಶನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು.
ಸ್ಥಳಕ್ಕೆ ಧಾವಿಸಿದ ಪೋಲಿಸರು ತೀವ್ರವಾಗಿ ಗಾಯಗೊಂಡಿದ್ದ ಮಹೇಶನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಆತ ದಾರಿಮಧ್ಯೆಯೇ ಸಾವನ್ನಪ್ಪಿದ್ದಾನೆ.
ಇದೊಂದು ಅತ್ಯಂತ ಹೃದಯವಿದ್ರಾವಕ ಘಟನೆ ಎಂದು ಹೇಳಿದ ಧಾರ್ ಎಸ್‌ಪಿ ಮಯಂಕ್ ಅವಸ್ಥಿ ಅವರು, ಮಹೇಶ ಮಾನಸಿಕ ಅಸ್ವಸ್ಥನಾಗಿದ್ದ ಎನ್ನುವುದನ್ನು ಪ್ರಾಥಮಿಕ ತನಿಖೆಗಳು ಸೂಚಿಸಿವೆ ಎಂದರು.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಮಹೇಶ ಅಲಿರಾಜ್‌ಪುರ ಜಿಲ್ಲೆಯ ಜೋಬಟ್ ಬಾಗಡಿ ನಿವಾಸಿಯಾಗಿದ್ದು,ಆತ ಮಾನಸಿಕ ಅಸ್ವಸ್ಥನಾಗಿದ್ದ ಮತ್ತು ಕಳೆದ 3-4 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಎಂದು ಕುಟುಂಬ ಸದಸ್ಯರು ಪೋಲಿಸರಿಗೆ ತಿಳಿಸಿದ್ದಾರೆ.
ಭೀಕರ ಹತ್ಯೆಗೆ ಕೇವಲ ಒಂದು ಗಂಟೆ ಮೊದಲು ಮಹೇಶ ಸಮೀಪದ ಅಂಗಡಿಯೊಂದರಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ್ದ ಎನ್ನಲಾಗಿದೆ.