ವಿದ್ಯಾರ್ಥಿಗೆ ಅಯ್ಯಪ್ಪ ಮಾಲೆ ಧರಿಸಿದ್ದಕ್ಕಾಗಿ ತರಗತಿ ಪ್ರವೇಶ ನಿರಾಕರಣೆ : ಪ್ರತಿಭಟನೆಯ ಬಳಿಕ ಶಾಲೆಯಿಂದ ಕ್ಷಮಾಪಣೆ
ಸಾಂದರ್ಭಿಕ ಚಿತ್ರ Photo: timesofindia
ವಿಜಯವಾಡ : ಎನ್‌ಟಿಆರ್ ಜಿಲ್ಲೆಯ ಗೊಲ್ಲಪುಡಿಯ ಖಾಸಗಿ ಶಾಲೆಯೊಂದರಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದಕ್ಕಾಗಿ ಐದನೇ ತರಗತಿಯ ವಿದ್ಯಾರ್ಥಿಗೆ ತರಗತಿಗೆ ಪ್ರವೇಶ ನಿರಾಕರಿಸಿದ ಘಟನೆ ವಿವಾದಕ್ಕೆ ಕಾರಣವಾಯಿತು.
ಶುಕ್ರವಾರ ಬೆಳಿಗ್ಗೆ ಅಯ್ಯಪ್ಪ ದೀಕ್ಷೆಯ ಭಾಗವಾಗಿ ಪವಿತ್ರ ಮಾಲೆ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿಯನ್ನು ತರಗತಿಗೆ ಬಿಡದೆ ವಾಪಸ್ ಮನೆಗೆ ಕಳುಹಿಸಿದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಸದಸ್ಯರು ಹಾಗೂ ಸ್ಥಳೀಯರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಯ ಧಾರ್ಮಿಕ ಹಕ್ಕು ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಶಾಲೆಯ ಆಡಳಿತ ಮಂಡಳಿ ಕ್ಷಮೆಯಾಚಿಸಬೇಕು ಹಾಗೂ ವಿದ್ಯಾರ್ಥಿಗೆ ತರಗತಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಭವಾನಿಪುರಂ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ನಂತರ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಯು.ವಿ. ಸುಬ್ಬಾ ರಾವ್ ಮಧ್ಯಸ್ಥಿಕೆ ವಹಿಸಿ, ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದರು. ಈ ನಂತರ ಶಾಲೆಯು ಕ್ಷಮೆಯಾಚಿಸಿ, ವಿದ್ಯಾರ್ಥಿಗೆ ಅಯ್ಯಪ್ಪ ಮಾಲೆ ಹಾಗೂ ದೀಕ್ಷಾ ವಸ್ತ್ರ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಲು ಒಪ್ಪಿಕೊಂಡಿತು.
ಡಿಇಒ ಅವರು ಶಾಲೆಗೆ ನೋಟಿಸ್ ಜಾರಿ ಮಾಡಿ, ಎರಡು ದಿನಗಳಲ್ಲಿ ಸ್ಪಷ್ಟೀಕರಣ ನೀಡುವಂತೆ ನಿರ್ದೇಶಿಸಿದ್ದಾರೆ. ಯಾವುದೇ ಖಾಸಗಿ ಅಥವಾ ಅನುದಾನಿತ ಶಾಲೆಗಳು ವಿದ್ಯಾರ್ಥಿಗಳನ್ನು ಅವರ ಧಾರ್ಮಿಕ ಚಿಹ್ನೆಗಳ ಆಧಾರದ ಮೇಲೆ ತರಗತಿಗಳಿಗೆ ಪ್ರವೇಶ ನಿರಾಕರಿಸಬಾರದು ಎಂದು ಎಚ್ಚರಿಸಿದ್ದಾರೆ.
“ನಿಯಮ ಉಲ್ಲಂಘಿಸಿದರೆ, ಶಾಲೆಯ ಮಾನ್ಯತೆ ರದ್ದುಗೊಳಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ವಿದ್ಯಾಧರಪುರಂ ಪ್ರದೇಶದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು.