×
Ad

ಅದಾನಿ ಗ್ರೂಪ್‌ ಷೇರು ಖರೀದಿಗಳಿಗೆ ಬಳಸಲಾಗಿದೆಯೆನ್ನಲಾದ 8 ಸಾಗರೋತ್ತರ ಸಂಸ್ಥೆಗಳ ಪೈಕಿ 6 ಬಾಗಿಲು ಮುಚ್ಚಿವೆ: ವರದಿ

Update: 2023-09-07 16:57 IST

ಗೌತಮ ಅದಾನಿ (PTI)

ಹೊಸದಿಲ್ಲಿ: ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವ್ಯಕ್ತಿಗಳಿಂದ ಸಮೂಹದ ಲಿಸ್ಟೆಡ್‌ ಕಂಪೆನಿಗಳ ಷೇರುಗಳನ್ನು ಖರೀದಿಸಲು ಬಳಸಿದ್ದರೆನ್ನಲಾದ ಬರ್ಮುಡಾ ಮತ್ತು ಮಾರಿಷಸ್‌ ಮೂಲದ ಏಳು ಪಬ್ಲಿಕ್‌ ಫಂಡ್‌ಗಳ ಪೈಕಿ ಆರು ಬಾಗಿಲು ಮುಚ್ಚಿವೆ ಎಂದು ವರದಿಯಾಗಿದೆ. ಅವುಗಳು ಕಾರ್ಯಾಚರಿಸುವ ದೇಶಗಳ ರೆಗ್ಯುಲೇಟರಿ ಫೈಲಿಂಗ್ಸ್‌ ಆಧರಿಸಿ ಅವು ಮುಚ್ಚಿವೆ ಎಂದು ತಿಳಿದು ಬಂದಿದೆ ಎಂದು ‘mint’ ವರದಿ ಮಾಡಿದೆ.

ಎರಡು ಮಾರಿಷಸ್‌ ಮೂಲದ ಫಂಡ್‌ಗಳು ಕಳೆದ ವರ್ಷ ಬಾಗಿಲು ಮುಚ್ಚಿದ್ದರೆ ಮೂರನೆಯದು ಈ ವರ್ಷ ಮುಚ್ಚುವ ಹಂತದಲ್ಲಿದೆ ಎಂದೂ ವರದಿಯಾಗಿದೆ. ಅದಾನಿ ಗ್ರೂಪ್‌ ಕಂಪೆನಿಗಳ ಷೇರು ಹೊಂದಿರುವ ಸಾಗರೋತ್ತರ ಸಂಸ್ಥೆಗಳ ಕುರಿತು 2020ರಲ್ಲಿ ತನಿಖೆ ಆರಂಭಗೊಂಡ ನಂತರದ ಬೆಳವಣಿಗೆ ಇದಾಗಿದೆ.

ಈ ಹೂಡಿಕೆ ಸಂಸ್ಥೆಗಳಿಂದ ಅಂತಿಮವಾಗಿ ಯಾರು ಪ್ರಯೋಜನ ಪಡೆಯುತ್ತಿದ್ದಾರೆಂದು ಗುರುತಿಸುವುದು ಈ ಸಂಸ್ಥೆಗಳು ಈಗ ಬಾಗಿಲು ಮುಚ್ಚಿರುವ ಕಾರಣ ಸೆಬಿಗೆ ಕಷ್ಟವಾಗಲಿದೆ.

ತನಿಖಾ ಪತ್ರಿಕೋದ್ಯಮಿಗಳ ಜಾಗತಿಕ ನೆಟ್‌ವರ್ಕ್‌ ಆಗಿರುವ ‘ದಿ ಆರ್ಗನೈಸ್ಡ್‌ ಕ್ರೈಂ’ ಎಂಡ್‌ ಕರಪ್ಶನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್‌ ಇತ್ತೀಚೆಗೆ ನೀಡಿದ ಮಾಹಿತಿಯ ಪ್ರಕಾರ, ಅದಾನಿ ಸಮೂಹದಲ್ಲಿ ಗೌಪ್ಯವಾಗಿ ಹೂಡಿಕೆ ಮಾಡಿದ್ದ ಇಬ್ಬರು ವ್ಯಕ್ತಿಗಳು ಅದಾನಿ ಸಮೂಹದಲ್ಲಿ ಬಹುಪಾಲನ್ನು ಹೊಂದಿರುವ ಮಾಲೀಕರಿಗೆ ಹತ್ತಿರದವರಾಗಿದ್ದಾರೆ. ಇದರಿಂದ ಫ್ರೀ-ಫ್ಲೋಟ್‌ ಕುರಿತಂತೆ ಸೆಬಿ ನಿಯಮಗಳ ಉಲ್ಲಂಘನೆಯ ಕುರಿತು ಪ್ರಶ್ನೆಗಳು ಎದ್ದಿವೆ.

ಈ ಇಬ್ಬರು ವ್ಯಕ್ತಿಗಳಾದ ನಾಸಿರ್‌ ಅಲಿ ಶಬಾನ್‌ ಅಹ್ಲಿ ಮತ್ತು ಚಂಗ್‌ ಚುಂಗ್-ಲಿಂಗ್‌ ವರ್ಷಗಳ ಕಾಲ ಅದಾನಿ ಗ್ರೂಪಿನ ಮಿಲಿಯಗಟ್ಟಲೆ ಡಾಲರ್‌ ಮೌಲ್ಯದ ಷೇರುಗಳ ವ್ಯವಹಾರ ನಡೆಸಿದ್ದರು ಎಂದು ಒಸಿಸಿಆರ್‌ಪಿ ವರದಿ ಹೇಳಿದೆ.

“ಇಬ್ಬರೂ ಅದಾನಿ ಕುಟುಂಬಕ್ಕೆ ಹತ್ತಿರದವರಾಗಿದ್ದಾರೆ ಹಾಗೂ ಸಂಯೋಜಿತ ಕಂಪೆನಿಗಳ ನಿರ್ದೇಶಕರು ಮತ್ತು ಷೇರುದಾರರೂ ಆಗಿದ್ದಾರೆ.” ಎಂದು ವರದಿ ಹೇಳಿದೆ.

“ಆದರೆ ಅದಾನಿ ಗ್ರೂಪಿನಲ್ಲಿ ಈ ಇಬ್ಬರು ಮಾಡಿದ ಹೂಡಿಕೆಗಳು ಅದಾನಿ ಕುಟುಂಬದ ಹಣದಿಂದಲೇ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ, ಅವರ ಆರ್ಥಿಕ ಮೂಲದ ಬಗ್ಗೆ ತಿಳಿದಿಲ್ಲ. ಆದರೆ ಒಸಿಸಿಆರ್‌ಪಿ ಪಡೆದುಕೊಂಡ ದಾಖಲೆಗಳಿಂದ ತಿಳಿದು ಬರುವುದೇನೆಂದರೆ ವಿನೋದ್‌ ಅದಾನಿ ಅವರು ಮಾರಿಷಸ್‌ ಫಂಡ್‌ಗಳಲ್ಲಿ ಒಂದನ್ನು ತಮ್ಮ ಸ್ವಂತ ಹೂಡಿಕೆಗಳನ್ನು ಮಾಡಲು ಬಳಸಿದ್ದರು,” ಎಂದು ಒಸಿಸಿಆರ್‌ಪಿ ಸಂಸ್ಥೆಯು ದಿ ಗಾರ್ಡಿಯನ್‌ ಮತ್ತು ಫೈನಾನ್ಶಿಯಲ್‌ ಟೈಮ್ಸ್‌ ಜೊತೆಗೆ ಹಂಚಿಕೊಂಡ ತನ್ನ ವರದಿಯಲ್ಲಿ ಹೇಳಿದೆ.

ಆದರೆ ಎಲ್ಲಾ ಆರೋಪಗಳನ್ನು ಅದಾನಿ ಸಮೂಹ ನಿರಾಕರಿಸಿದೆ.

ಮುಚ್ಚಲಾಗಿರುವ ಸಾಗರೋತ್ತರ ಸಂಸ್ಥೆಗಳ ಹೆಸರುಗಳನ್ನು ‘ಮಿಂಟ್‌’ ವರದಿ ಉಲ್ಲೇಖಿಸಿದೆ. ಬರ್ಮುಡಾದಲ್ಲಿ ಗ್ಲೋಬಲ್‌ ಆಪೊರ್ಚುನಿಟೀಸ್‌ ಫಂಡ್‌ ಜನವರಿ 6, 2005ರಂದು ನೋಂದಾಯಿತಗೊಂಡಿದ್ದರೆ ಡಿಸೆಂಬರ್‌ 12, 2006ರಂದು ಮುಚ್ಚಿದೆ. ಮಾರಿಷಸ್‌ ಮೂಲದ ಅಸ್ಸೆಂಟ್‌ ಟ್ರೇಡ್‌ ಎಂಡ್‌ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಎಪ್ರಿಲ್‌ 2010ರಲ್ಲಿ ಆರಂಭಗೊಂಡಿದ್ದರೆ ಜೂನ್‌ 2019ರಲ್ಲಿ ಮುಚ್ಚಿದೆ. ಲಿಂಗೋ ಟ್ರೇಡಿಂಗ್‌ ಎಂಡ್‌ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಡಿಸೆಂಬರ್‌ 2009ರಲ್ಲಿ ಆರಂಭಗೊಂಡಿದ್ದರೆ ಮಾರ್ಚ್‌ 2015ರಲ್ಲಿ ಮುಚ್ಚಿದೆ. ಮಿಡ್‌ ಈಸ್ಟ್‌ ಓಶಿಯನ್‌ ಟ್ರೇಡ್‌ ಎಂಡ್‌ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್ ಸೆಪ್ಟೆಂಬರ್‌ 2011ರಲ್ಲಿ ಆರಂಭಗೊಂಡಿದ್ದರೆ ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಮುಚ್ಚಿದೆ.

ಎಎಂ ರಿಸರ್ಜೆಂಟ್‌ ಫಂಡ್‌ ಮೇ 2010ರಲ್ಲಿ ಆರಂಭಗೊಂಡಿದ್ದರೆ ಕಳೆದ ವರ್ಷದ ಫೆಬ್ರವರಿಯಲ್ಲಿ ಮುಚ್ಚಿದೆ, ಏಷ್ಯಾ ವಿಷನ್‌ ಫಂಡ್‌ ಮೇ 2010ರಲ್ಲಿ ಆರಂಭಗೊಂಡು ಇದೀಗ ಮುಚ್ಚುಗಡೆ ಹಂತದಲ್ಲಿದೆ. ಎಮರ್ಜಿಂಗ್‌ ಇಂಡಿಯಾ ಫೋಕಸ್‌ ಫಂಡ್ಸ್‌ ಮೇ 19, 2008ರಲ್ಲಿ ಆರಂಭಗೊಂಡು ಈಗಲೂ ಸಕ್ರಿಯವಾಗಿದೆ. ಯುಎಇಯಲ್ಲಿ ನೋಂದಾಯಿತವಾಗಿರುವ ಗಲ್ಫ್‌ ಏಷ್ಯಾ ಟ್ರೇಡ್‌ ಎಂಡ್‌ ಇನ್ವೆಸ್ಟ್‌ಮೆಂಟ್‌ ಕುರಿತು ಮಾಹಿತಿಯಿಲ್ಲ ಎಂದು ವರದಿಯಾಗಿದೆ.

ಸೆಬಿಗೆ ಡಿಆರ್‌ಐ ಪತ್ರ

ಒಸಿಸಿಆರ್‌ಪಿ ವರದಿಯಲ್ಲಿ ಉಲ್ಲೇಖಗೊಂಡಂತೆ ಡಿಆರ್‌ಐ ಬರೆದ ಪತ್ರ ಸೆಬಿಗೆ ಜನವರಿ 2014ರಲ್ಲಿ ಸಿಕ್ಕಿತ್ತು. ಇದು ಸೆಬಿ ತನಿಖೆ ನಡೆಸುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದ್ದಾಗಿತ್ತು.

ತಾನು ತನಿಖೆ ನಡೆಸುತ್ತಿರುವ ಇನ್‌ವಾಯ್ಸಿಂಗ್‌ ಅಧಿಕ ತೋರಿಸಿದ ಪ್ರಕರಣದ ಮೂಲಕ ಹಣ ಮಾರಿಷಸ್‌ನಿಂದ ಕಳುಹಿಸಲಾಗಿತ್ತು ಎಂದು ಡಿಆರ್‌ಐಗೆ ಪುರಾವೆಯಿತ್ತು ಎಂದು ಒಸಿಸಿಆರ್‌ಪಿ ವರದಿ ಹೇಳಿದೆ.

“ಈ ರೀತಿ ಬಂದ ಹಣ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮತ್ತು ಹೂಡಿಕೆ ಹಿಂಪಡೆಯಲು ಬಳಸಿರಬೇಕು,” ಎಂದು ಆಗ ಡಿಆರ್‌ಐ ಮಹಾನಿರ್ದೇಶಕರಾಗಿದ್ದ ನಜೀಬ್‌ ಶಾ ಆಗಿನ ಸೆಬಿ ಮುಖ್ಯಸ್ಥ ಯು ಕೆ ಸಿನ್ಹಾ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದರು.

ಸಿನ್ಹಾ ಅವರು ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಎನ್‌ಡಿಟಿವಿಯ ನಾನ್-ಎಕ್ಸಿಕ್ಯೂಟಿವ್‌ ಚೇರ್‌ಮೆನ್‌ ಮತ್ತು ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಎನ್‌ಡಿಟಿವಿಯಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು ಅದಾನಿ ಸಮೂಹ ಹೊಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News