ಉತ್ತರ ಪ್ರದೇಶ: ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ; ಆರು ಮಹಿಳೆಯರು ಮೃತ್ಯು
ಸಾಂದರ್ಭಿಕ ಚಿತ್ರ (PTI)
ಮಿರ್ಝಾಪುರ್ (ಉತ್ತರ ಪ್ರದೇಶ): ರೈಲು ಹಳಿ ದಾಟುತ್ತಿದ್ದ ಆರು ಮಹಿಳೆಯರಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ, ಅವರೆಲ್ಲ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಮಿರ್ಝಾಪುರ್ ಜಿಲ್ಲೆಯ ಚುನಾರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ಬೆಳಗ್ಗೆ ಸುಮಾರು 9.30 ಗಂಟೆಗೆ ಪ್ರಯಾಗ್ ರಾಜ್ ಪ್ರಯಾಣಿಕರ ರೈಲು ಚುನಾರ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಚುನಾರ್ ಜಂಕ್ಷನ್‌ನಲ್ಲಿ ಪ್ಲಾಟ್‌ಫಾರ್ಮ್ ಎದುರು ಬದಿಯಲ್ಲಿರುವ ಚೋಪನ್-ಪ್ರಯಾಗರಾಜ್ ಎಕ್ಸ್‌ಪ್ರೆಸ್‌ನಿಂದ ಸಂತ್ರಸ್ತರು ಇಳಿದಿದ್ದರು. ಬಳಿಕ, ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲು ಅವರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆಯ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಪ್ರಕಾಶ್ ಡಿ., “ಮಹಿಳೆಯರು ಮಿರ್ಝಾಪುರ್ ಜಿಲ್ಲೆಯವರಾಗಿದ್ದು, ಎಲ್ಲ ಆರು ಮಹಿಳೆಯರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದ್ದಾರೆ.