ದ್ವೇಷ ಭಾಷಣದ ಬಗ್ಗೆ ದೂರು ನೀಡಿದ ಹರ್ಷ್ ಮಂದರ್ ವಿರುದ್ಧ ಕನಿಷ್ಠ 100 ಪ್ರಕರಣಗಳನ್ನು ದಾಖಲಿಸುವ ಬೆದರಿಕೆ ಹಾಕಿದ ಅಸ್ಸಾಂ ಸಿಎಂ
ಹರ್ಷ್ ಮಂದರ್ , ಹಿಮಂತ ಬಿಸ್ವಾ ಶರ್ಮಾ | Photo Credit : PTI
ಖುಮತೈ (ಅಸ್ಸಾಂ): ಬಂಗಾಳಿ ಭಾಷಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ತಮ್ಮ ಮೇಲೆ ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್ ಪೊಲೀಸ್ ದೂರು ದಾಖಲಿಸಿದ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, “ನಾನು ಅವರ ವಿರುದ್ಧ ಕನಿಷ್ಠ 100 ಪ್ರಕರಣಗಳನ್ನು ದಾಖಲಿಸುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾರೆ.
ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, “ಹರ್ಷ್ ಮಂದರ್ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಯಾರು ಹರ್ಷ್ ಮಂದರ್? ಅವರಂತಹ ಅನೇಕರನ್ನು ನಾನು ನೋಡಿದ್ದೇನೆ” ಎಂದು ಅವರು ಹರಿಹಾಯ್ದಿದ್ದಾರೆ.
“ಅವರು ನನ್ನ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ನೋಡುತ್ತಿರಿ, ನಾನು ಕನಿಷ್ಠ 100 ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸುತ್ತೇನೆ. ನನ್ನ ಬಳಿ ಅದಕ್ಕೆ ಬೇಕಾದ ಪುರಾವೆಗಳಿವೆ” ಎಂದು ಅವರು ನೇರ ಬೆದರಿಕೆ ಒಡ್ಡಿದ್ದಾರೆ.
“ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದ್ದಾರೆ” ಎಂದು ಹರ್ಷ್ ಮಂದರ್ ವಿರುದ್ಧ ವಾಗ್ದಾಳಿ ನಡೆಸಿದ ಹಿಮಂತ ಬಿಸ್ವ ಶರ್ಮ, “ಒಂದು ವೇಳೆ ಆಗ ನಾನಿದ್ದಿದ್ದರೆ, ಆತನಿಗೆ ಒಂದು ಪಾಠ ಕಲಿಸುತ್ತಿದ್ದೆ” ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ನಾಗರಿಕ ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸಿದಾಗ, ರಾಜ್ಯಕ್ಕೆ ಭೇಟಿ ನೀಡಿದ್ದ ಹರ್ಷ್ ಮಂದರ್ ಹಾಗೂ ಇನ್ನಿತರರು ಇಡೀ ಪ್ರಕ್ರಿಯೆಯನ್ನು ಹಾಳುಗೆಡವಿದ್ದರು ಎಂದು ಅವರು ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಬಂಗಾಳಿ ಭಾಷಿಕ ಮುಸ್ಲಿಮರ ವಿರುದ್ಧ ಹಿಮಂತ ಬಿಸ್ವ ಶರ್ಮ ದ್ವೇಷ, ಕಿರುಕುಳ ಹಾಗೂ ತಾರತಮ್ಯವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ, ಹರ್ಷ್ ಮಂದರ್ ಅವರು ದಿಲ್ಲಿಯ ಹೌಝ್ ಖಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.