×
Ad

ʼಕೇರಳ ಸ್ಟೋರಿʼ ಸೀಕ್ವೆಲ್ ಟೀಸರ್ ಬಿಡುಗಡೆ: ಕೋಮು ಧ್ರುವೀಕರಣದ ಉದ್ದೇಶ ಹೊಂದಿದೆ ಎಂದ ಕೇರಳ ಸಚಿವ

"ದ್ವೇಷದ ಬೀಜ ಬಿತ್ತಿ, ರಾಜಕೀಯ ಲಾಭ ಪಡೆಯುವ ಪ್ರಯತ್ನಗಳ ವಿರುದ್ಧ ಕೇರಳ ಒಗ್ಗಟ್ಟಾಗಿ ಎದ್ದು ನಿಲ್ಲಲಿದೆ"

Update: 2026-01-31 22:42 IST

ಸಾಜಿ ಚೆರಿಯನ್(PTI) , ಕೇರಳ ಸ್ಟೋರಿ (X)

ತಿರುವನಂತಪುರಂ: ‘ಕೇರಳ ಸ್ಟೋರಿ’ಯ ಎರಡನೆ ಭಾಗದ ಟೀಸರ್ ಬಿಡುಗಡೆಯಾಗಿದ್ದು, ಇದರ ವಿರುದ್ಧ ವಾಗ್ದಾಳಿ ನಡೆಸಿರುವ ಕೇರಳ ಸಚಿವ ಸಾಜಿ ಚೆರಿಯನ್, “ಈ ಟೀಸರ್ ಕೋಮು ಧ್ರುವೀಕರಣ ಹಾಗೂ ರಾಜ್ಯದ ಜಾತ್ಯತೀತ ಹೆಣಿಗೆಗೆ ಧಕ್ಕೆ ತರುವ ಉದ್ದೇಶ ಹೊಂದಿದೆ” ಎಂದು ಆರೋಪಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಾಜಿ ಚೆರಿಯನ್, “ಇದು ಮೊದಲ ನೋಟಕ್ಕೇ ಸಂಘ ಪರಿವಾರ ಕಾರ್ಖಾನೆಯ ಯಾವುದೇ ವಾಸ್ತವಗಳಿಗೆ ಸಂಬಂಧವಿಲ್ಲದ ಮತ್ತೊಂದು ಸುಳ್ಳು ಉತ್ಪನ್ನದಂತೆ ಕಂಡು ಬರುತ್ತಿದೆ. ಚಿತ್ರ ನಿರ್ಮಾಪಕರು ಜಾತ್ಯತೀತತೆಯ ಮಾದರಿಯಾದ ಕೇರಳ ರಾಜ್ಯವನ್ನು ಧಾರ್ಮಿಕ ಭಯೋತ್ಪಾದಕತೆಯ ಜನ್ಮಸ್ಥಳವನ್ನಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಆ ಮೂಲಕ, ರಾಜ್ಯವನ್ನು ಜಗತ್ತಿನೆದುರು ಅವಮಾನಿಸುತ್ತಿದ್ದಾರೆ” ಎಂದು ಆಪಾದಿಸಿದ್ದಾರೆ.

ʼಲವ್ ಜಿಹಾದ್ʼ ನ ಸುಳ್ಳು ಆರೋಪಗಳು ಹಾಗೂ ದ್ವೇಷ ತುಂಬಿರುವ ಸಂಭಾಷಣೆಗಳ ಪುನರಾವರ್ತಿತ ಸುಳ್ಳು ಪ್ರಚಾರವು ಕೇರಳದ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವನ್ನು ಹಾಳುಗೆಡವುವ ಪ್ರಯತ್ನವಾಗಿದೆ ಎಂದೂ ಕೇರಳ ರಾಜ್ಯ ಸಂಸ್ಕೃತಿ ಸಚಿವರಾಗಿರುವ ಸಾಜಿ ಚೆರಿಯನ್ ದೂರಿದ್ದಾರೆ.

“ಅಭಿವ್ಯಕ್ತಿ ಸ್ವಾತಂತ್ರ್ಯವು ದೇಶವನ್ನು ಧ್ರುವೀಕರಣಗೊಳಿಸಲು ಅಥವಾ ಜನರ ನಡುವೆ ವಿಭಜನೆ ಸೃಷ್ಟಿಸಲು ಪರವಾನಗಿಯಲ್ಲ. ಈಗಾಗಲೇ ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಲಯಗಳು ತಳ್ಳಿ ಹಾಕಿರುವ ಆರೋಪಗಳನ್ನು ಸತ್ಯ ಎಂದು ಬಿಂಬಿಸಲು ಹೊರಟಿರುವುದು ಕೇವಲ ರಾಜಕೀಯ ಲಾಭಕ್ಕಾಗಿ” ಎಂದು ಅವರು ಟೀಕಿಸಿದ್ದಾರೆ. ಇಂತಹ ಪ್ರಯತ್ನಗಳಿಗೆ ಕೇರಳ ಸಾಮೂಹಿಕ ಪ್ರತಿರೋಧವೊಡ್ಡಲಿದೆ ಎಂದೂ ಅವರು ಹೇಳಿದ್ದಾರೆ.

“ಕೋಮುವಾದಿ ದ್ವೇಷದ ಬೀಜವನ್ನು ಬಿತ್ತಿ, ರಾಜಕೀಯ ಲಾಭ ಪಡೆಯುವ ಪ್ರಯತ್ನಗಳ ವಿರುದ್ಧ ಕೇರಳ ಒಗ್ಗಟ್ಟಾಗಿ ಎದ್ದು ನಿಲ್ಲಲಿದೆ” ಎಂದೂ ಅವರು ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News