ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದಲ್ಲಿ ಮೇಘ ಸ್ಫೋಟ: ಮೃತರ ಸಂಖ್ಯೆ 60ಕ್ಕೆ ಏರಿಕೆ
ಅವಶೇಷಗಳಡಿ ಸಿಲುಕಿಕೊಂಡಿರುವವರ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ
ಕಿಶ್ತ್ವಾರ (ಜಮ್ಮು ಮತ್ತು ಕಾಶ್ಮೀರ): ಗುರುವಾರ ಮಧ್ಯಾಹ್ನ ಕಿಶ್ತ್ವಾರ ಜಿಲ್ಲೆಯ ಚಾಶ್ತೋಗಿ ಜಿಲ್ಲೆಯಲ್ಲಿ ನಡೆದ ಮೇಘ ಸ್ಫೋಟದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀಟರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿವೆ.
ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ, “ಅವಶೇಷಗಳಡಿ ಈಗಲೂ 500ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಕಿಶ್ತ್ವಾರದಲ್ಲಿ ಈಗಲೂ 500ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂಬುದು ನನ್ನ ಶಂಕೆಯಾಗಿದೆ. ಕೆಲವು ಅಧಿಕಾರಿಗಳು ಈ ಸಂಖ್ಯೆ 1,000 ದಾಟಬಹುದು ಎಂದು ಹೇಳುತ್ತಿದ್ದಾರೆ. ಇದು ತೀವ್ರ ದುಃಖದ ಸಮಯ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಕಿಶ್ತ್ವಾರ ಜಿಲ್ಲೆಯಲ್ಲಿನ ಮೇಘ ಸ್ಫೋಟದ ಕುರಿತು ಸಂತಾಪ ವ್ಯಕ್ತಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣವನ್ನು ಪ್ರಾರಂಭಿಸಿದರು.
ಮೇಘಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ ಉಮರ್ ಅಬ್ದುಲ್ಲಾ, ಘಟನೆಯಲ್ಲಿ ಗಾಯಗೊಂಡವರು ಆದಷ್ಟೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಘಟನೆಯಲ್ಲಿ ಬಾಧಿತರಾಗಿರುವ ಜನರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸಲಾಗುವುದು ಎಂದು ಅವರು ಇದೇ ವೇಳೆ ಭರವಸೆ ನೀಡಿದರು.