ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಅಭಿಯಾನ: ಸರ್ವಪಕ್ಷ ನಿಯೋಗಕ್ಕೆ ಶಶಿ ತರೂರ್ ನೇತೃತ್ವ
ಹೊಸದಿಲ್ಲಿ: ಆಪರೇಷನ್ ಸಿಂಧೂರ ನಂತರ ಕೇಂದ್ರ ಸರಕಾರವನ್ನು ಹೊಗಳಿದ್ದಕ್ಕಾಗಿ ಸ್ವಪಕ್ಷದಿಂದಲೇ ಟೀಕೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ʼಭಯೋತ್ಪಾದನೆಯ ವಿರುದ್ಧದ ಭಾರತದ ರಾಜತಾಂತ್ರಿಕ ಅಭಿಯಾನ' ನಡೆಸುವ ಸರ್ವಪಕ್ಷ ನಿಯೋಗದ ನೇತೃತ್ವವನ್ನು ವಹಿಸಲಿದ್ದಾರೆ.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಗುಂಪುಗಳ ಕುರಿತು ಭಾರತದ ನಿಲುವನ್ನು ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಮನದಟ್ಟು ಮಾಡಲು ಬಹುಪಕ್ಷೀಯ ನಿಯೋಗವೊಂದನ್ನು ವಿದೇಶಕ್ಕೆ ಕಳುಹಿಸಲಿದೆ. ನಿಯೋಗವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಲಿದೆ.
7 ಮಂದಿ ಸದಸ್ಯರ ನಿಯೋಗದಲ್ಲಿ ಶಶಿ ತರೂರ್, ವಿರೋಧ ಪಕ್ಷದ ಇಬ್ಬರು ಸಂಸದರು ಹಾಗೂ ಆಡಳಿತ ಪಕ್ಷದ ನಾಲ್ವರು ಸಂಸದರಿರಲಿದ್ದಾರೆ ಎಂದು ತಿಳಿದು ಬಂದಿದೆ.