×
Ad

ಮಧ್ಯಪ್ರದೇಶದಲ್ಲಿ ಪ್ರತಿ ದಿನ 7 ಮಂದಿ ಪರಿಶಿಷ್ಟ ಜಾತಿ, ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ: ರಾಜ್ಯ ಸರಕಾರ

Update: 2025-07-30 13:58 IST

ಸಾಂದರ್ಭಿಕ ಚಿತ್ರ (PTI)

ಭೋಪಾಲ್: ಮಧ್ಯಪ್ರದೇಶದಲ್ಲಿ ಪ್ರತಿ ದಿನ ಸರಾಸರಿ 7 ಮಂದಿ ಪರಿಶಿಷ್ಟ ಜಾತಿ, ಬುಡಕಟ್ಟು ಸಮುದಾಯಗಳಿಗೆ ಸೇರಿದ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಮಂಗಳವಾರ ಮಧ್ಯಪ್ರದೇಶ ಸರಕಾರ ವಿಧಾನಸಭೆಗೆ ತಿಳಿಸಿದೆ.

ವಿರೋಧ ಪಕ್ಷದ ಶಾಸಕ ಆರಿಫ್ ಮಸೂದ್ ರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ರಾಜ್ಯ ಸರಕಾರ, “2022ರಿಂದ 2024ರ ನಡುವೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಒಟ್ಟು 7,418 ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ದಾಖಲಾಗಿವೆ” ಎಂದು ತಿಳಿಸಿದೆ. ಈ ದತ್ತಾಂಶದನ್ವಯ, ಪ್ರತಿ ದಿನ ಸರಾಸರಿ ಏಳು ಮಂದಿ ಪರಿಶಿಷ್ಟ ಜಾತಿ ಹಾಗೂ ಆದಿವಾಸಿ ಮಹಿಳೆಯರ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರ ನಡೆಯುತ್ತಿದೆ.

ಇದೇ ಅವಧಿಯಲ್ಲಿ ಈ ಸಮುದಾಯಗಳ 558 ಮಹಿಳೆಯರನ್ನು ಹತ್ಯೆಗೈಯ್ಯಲಾಗಿದ್ದರೆ, 338 ಸಂತ್ರಸ್ತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸಂಗತಿಯೂ ಈ ದತ್ತಾಂಶದಿಂದ ಬಯಲಾಗಿದೆ. ಈ ಅಂಕಿ-ಸಂಖ್ಯೆಗಳಿಂದ ಕೌಟುಂಬಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ಕುರಿತು ಕಳವಳಕಾರಿ ಸಂಗತಿಗಳೂ ಬೆಳಕಿಗೆ ಬಂದಿವೆ.

ಸರಿಸುಮಾರು 1,906 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಗುರಿಯಾಗಿದ್ದು, ಇದರರ್ಥ ಪ್ರತಿ ದಿನ ಇಬ್ಬರು ಮಹಿಳೆಯರು ತಮ್ಮ ಸ್ವಂತ ಮನೆಗಳಲ್ಲೇ ಕೌಟುಂಬಿಕ ದೌರ್ಜನ್ಯಕ್ಕೀಡಾಗುತ್ತಿದ್ದಾರೆ.

ಇದರೊಂದಿಗೆ 5,983 ಲೈಂಗಿಕ ಕಿರುಕುಳ ಪ್ರಕರಣಗಳೂ ದಾಖಲಾಗಿದ್ದು, ಪ್ರತಿ ದಿನ ಸುಮಾರು ಐವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮಹಿಳೆಯರು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮಹಿಳೆಯರ ಮೇಲಿನ ಒಟ್ಟು 44,978 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರರ್ಥ, ಮಧ್ಯಪ್ರದೇಶದಲ್ಲಿ ಈ ಅಂಚಿನ ಸಮುದಾಯಗಳ ಮಹಿಳೆಯರ ಮೇಲೆ ಪ್ರತಿ ನಿತ್ಯ ಸರಾಸರಿ 41 ಅಪರಾಧ ಘಟನೆಗಳು ನಡೆಯುತ್ತಿವೆ ಎಂದಾಗಿದೆ.

ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯ ಪೈಕಿ, ಅಂದಾಜು ಒಟ್ಟು ಶೇ. 38ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿವೆ. ಈ ಪೈಕಿ ಶೇ. 16ರಷ್ಟು ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳಿದ್ದರೆ, ಶೇ. 22ರಷ್ಟು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸಮುದಾಯಗಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News