×
Ad

7/11 ಮುಂಬೈ ರೈಲು ಸ್ಫೋಟ ಪ್ರಕರಣ | ಎಲ್ಲಾ 12 ಆರೋಪಿಗಳ ಖುಲಾಸೆ

Update: 2025-07-21 11:07 IST

ಬಾಂಬೆ ಹೈಕೋರ್ಟ್ (PTI)

ಮುಂಬೈ: 2006ರ ಜುಲೈ 11ರಂದು ಮುಂಬೈನ ರೈಲುಗಳಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ದೋಷಿಗಳೆಂದು ಆರೋಪಿಸಲಾಗಿದ್ದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ನ್ಯಾಯಾಲಯವು, ಪ್ರಾಸಿಕ್ಯೂಷನ್ ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ "ಸಂಪೂರ್ಣವಾಗಿ ವಿಫಲವಾಗಿದೆ" ಎಂದು ಟೀಕಿಸಿದೆ.

ಪಶ್ಚಿಮ ರೈಲ್ವೆ ಮಾರ್ಗದ ಲೋಕಲ್ ರೈಲುಗಳಲ್ಲಿ ಸಂಭವಿಸಿದ ಏಳು ಸ್ಫೋಟಗಳಲ್ಲಿ 180 ಕ್ಕೂ ಹೆಚ್ಚು ಜನರು ಮೃತಪಟ್ಟು ಅನೇಕ ಮಂದಿ ಗಾಯಗೊಂಡಿದ್ದರು. 19 ವರ್ಷಗಳ ಹಿಂದೆ ನಡೆದ ಈ ಘಟನೆ ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು.

ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರಿದ್ದ ವಿಶೇಷ ಪೀಠವು ನೀಡಿದ ತೀರ್ಪಿನಲ್ಲಿ, "ಆರೋಪಿಗಳು ಈ ಅಪರಾಧಕ್ಕೆ ಹೊಣೆಯಾಗಿದ್ದಾರೆ ಎಂಬುದನ್ನು ನಂಬಲು ಸಾಕ್ಷ್ಯಗಳು ಪೂರ್ಣವಾಗಿಲ್ಲ. ಆದ್ದರಿಂದ ಎಲ್ಲ 12 ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ," ಎಂದು ಹೇಳಿದೆ.

"ಯಾವುದೇ ಬೇರೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿಲ್ಲವಾದರೆ, ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು" ಎಂಬ ಸೂಚನೆಯನ್ನೂ ನ್ಯಾಯಾಲಯವು ನೀಡಿದೆ.

2015 ರಲ್ಲಿ ವಿಶೇಷ ನ್ಯಾಯಾಲಯವು 12 ಮಂದಿಯನ್ನು ದೋಷಿಗಳೆಂದು ತೀರ್ಮಾನಿಸಿ, ಐದು ಜನರಿಗೆ ಮರಣದಂಡನೆ ಮತ್ತು ಉಳಿದ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿದೆ.

ತೀರ್ಪು ಹೊರಬಿದ್ದ ನಂತರ, ರಾಜ್ಯದ ವಿವಿಧ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಆರೋಪಿಗಳು ತಮ್ಮ ಪರ ವಕೀಲರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News