×
Ad

ಇಂಡಿಗೋ ಅವ್ಯವಸ್ಥೆ: ಮೋದಿ ಸರಕಾರವನ್ನು ಟೀಕಿಸಿದ ಅರ್ನಬ್ ಗೋಸ್ವಾಮಿ!

"ಇಷ್ಟೊಂದು ವಿಮಾನಗಳ ಹಾರಾಟ ರದ್ದುಗೊಂಡರೂ ಯಾವುದೇ ಪರಿಣಾಮ ಇಲ್ಲದಿರುವುದು ಭಾರತದಲ್ಲಿ ಮಾತ್ರ ಸಾಧ್ಯ"

Update: 2025-12-05 16:56 IST

Photo Credit : X (@republic) , PTI

ಹೊಸದಿಲ್ಲಿ: ಇಂಡಿಗೋ ವಿಮಾನದ ಅವ್ಯವಸ್ಥೆ ಬಳಿಕ ಪ್ರಯಾಣಿಕರ ಪರದಾಟದ ಬಗ್ಗೆ ರಿಪಬ್ಲಿಕ್ ಚಾನೆಲ್ ನ ಅರ್ನಬ್ ಗೋಸ್ವಾಮಿ ಕೇಂದ್ರ ಸರಕಾರದ ವಿರುದ್ಧ ನೇರ ಟೀಕೆ ನಡೆಸಿದ್ದಾರೆ. ʼಗೋದಿ ಮೀಡಿಯಾʼ ಮುಖ್ಯಸ್ಥ ಎಂದು ತನ್ನ ವಿಮರ್ಶಕರಿಂದ ಕರೆಯಲ್ಪಡುವ ಅರ್ನಬ್ ಗೋಸ್ವಾಮಿ ಇದೇ ಮೊದಲ ಬಾರಿಗೆ ಮೋದಿ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದು ಅಭಿಮಾನಿಗಳಿಗೇ ಅಚ್ಚರಿಯಾಗುವಂತೆ ಮಾಡಿದ್ದಾರೆ.

ಡಿಸೆಂಬರ್ 4ರ ಸಂಜೆ ರಿಪಬ್ಲಿಕ್ ಚಾನೆಲ್ ನಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ಸರಕಾರ ವಿಮಾನದ ಪ್ರಯಾಣಿಕರನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದೆ ಎಂದು ಹೇಳುವ ಮೂಲಕ ಅರ್ನಬ್ ಗೋಸ್ವಾಮಿ ತಮ್ಮ ಮಾತನ್ನು ಪ್ರಾರಂಭಿಸಿದರು. ಇಂಡಿಗೋ ವಿಮಾನ ರದ್ದತಿ ಮತ್ತು ದೇಶದಲ್ಲಿ ವಿಮಾನಯಾನದ ದುಸ್ಥಿತಿ ಬಗ್ಗೆ ಇಡೀ ಚರ್ಚೆಯು ಕೇಂದ್ರೀಕೃತವಾಗಿತ್ತು. ಚರ್ಚೆಯುದ್ದಕ್ಕೂ ಅರ್ನಬ್ ಮಾತು ತೀಕ್ಷ್ಣವಾಗಿತ್ತು.

ಚರ್ಚೆಯಲ್ಲಿ ಅರ್ನಬ್ ಗೋಸ್ವಾಮಿ ಪುಣೆ, ಅಹ್ಮದಾಬಾದ್ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಕಂಡು ಬಂದ ಗೊಂದಲದ ದೃಶ್ಯಗಳನ್ನು ತೋರಿಸಿದರು. ಪ್ರಯಾಣಿಕರು ತುಂಬಾ ಜನದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಪ್ರಯಾಣಿಕರು ನೆಲದ ಮೇಲೆ ಮಲಗಿದ್ದಾರೆ, ಮೂಲಭೂತ ಸೌಲಭ್ಯಗಳೇ ಇಲ್ಲ ಎಂದು ಹೇಳಿದರು. ಚಿಕ್ಕ ಮಕ್ಕಳು ಅಥವಾ ಹಿರಿಯ ಪೋಷಕರೊಂದಿಗೆ ಪ್ರಯಾಣ ಮಾಡುವ ಯಾರಿಗಾದರೂ ಈ ಸ್ಥಿತಿಯಲ್ಲಿ ಎಂತಹಾ ತೊಂದರೆ, ನೋವು ಉಂಟಾಗುತ್ತದೆ ಎಂಬುದು ಚೆನ್ನಾಗಿ ಅರ್ಥವಾಗುತ್ತದೆ ಎಂದು ಹೇಳಿದರು.

ಸರಕಾರ ಯಾವಾಗಲೂ ವಿಮಾನಯಾನ ಕ್ಷೇತ್ರವನ್ನು ಸುಧಾರಿಸಿದೆ ಎಂದು ಹೇಳಿಕೊಳ್ಳುತ್ತದೆ. ಆದರೆ ಪ್ರಯಾಣಿಕರ ದೈನಂದಿನ ಕಥೆ ಬೇರೆಯದ್ದೇ ಆಗಿದೆ. ಸರಕಾರ ಯಾವುದೇ ಸಹಾಯ ಮಾಡಿದ್ದರೂ ಅದು ಕೆಲವೇ ವ್ಯಕ್ತಿಗಳಿಗೆ ಮತ್ತು ಕೆಲವೇ ಕಂಪೆನಿಗಳಿಗೆ ಮಾತ್ರ ಲಾಭ ತಂದಿದೆ. ಒಟ್ಟಾರೆ ವಿಮಾನಯಾನ ಕ್ಷೇತ್ರಕ್ಕಲ್ಲ ಎಂದು ಹೇಳಿದರು.

ಅರ್ನಬ್ ಗೋಸ್ವಾಮಿ ಕಳೆದ ಮೂರು ದಿನಗಳ ಅಂಕಿಅಂಶವನ್ನು ತೋರಿಸಿ ನವೆಂಬರ್ ನಲ್ಲಿ ಇಂಡಿಗೋ ಒಟ್ಟು 1232 ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಹೇಳಿದರು. ಇದರಲ್ಲಿ 755 ವಿಮಾನಗಳ ರದ್ದತಿಗಳು ಸಿಬ್ಬಂದಿ ಕೊರತೆ ಮತ್ತು ಎಫ್ಡಿಟಿಎಲ್ (ಪೈಲಟ್ ಡ್ಯೂಟಿ ಸಮಯದ ನಿಯಮ) ಸಮಸ್ಯೆಗಳಿಂದ ಉಂಟಾಗಿದೆ. 258 ವಿಮಾನಗಳನ್ನು ಏರ್ಸ್ಪೇಸ್ ಮತ್ತು ವಿಮಾನ ನಿಲ್ದಾಣ ನಿರ್ಬಂಧಗಳಿಂದ ರದ್ದುಗೊಳಿಸಲಾಗಿದೆ. 92 ವಿಮಾನಗಳನ್ನು ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯ ದೋಷದಿಂದಾಗಿ ರದ್ದುಗೊಳಿಸಲಾಗಿದೆ. ಉಳಿದ 127 ವಿಮಾನಗಳ ಹಾರಾಟ ಬೇರೆ ಕಾರಣಗಳಿಂದ ರದ್ದುಗೊಂಡಿವೆ ಎಂದು ಹೇಳಿದರು.

ಭಾರತದಲ್ಲಿ ಪ್ರಯಾಣಿಕರನ್ನು ಸಾಮಾನ್ಯವಾಗಿ ಲಘುವಾಗಿ ನೋಡಲಾಗುತ್ತದೆ. ಇಷ್ಟೊಂದು ವಿಮಾನಗಳ ಹಾರಾಟ ರದ್ದುಗೊಂಡರೂ ಯಾವುದೇ ಪರಿಣಾಮ ಇಲ್ಲದಿರುವುದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಟೀಕಿಸಿದ್ದಾರೆ.

ದೇಶದ ವಿಮಾನಯಾನ ಮಾರುಕಟ್ಟೆಯ ಶೇ.91.5ರಷ್ಟು ಏರ್ ಇಂಡಿಯಾ ಮತ್ತು ಇಂಡಿಗೋ ಹಿಡಿತದಲ್ಲಿದೆ. ಅಕಾಸ್ ಮತ್ತು ಸ್ಪೈಸ್ ಜೆಟ್ ನಂಥವುಗಳಿಗೆ ಕೇವಲ ಸ್ವಲ್ಪ ಪಾಲು ಮಾತ್ರ ಉಳಿದಿದೆ. ಈ ಎರಡು ದೊಡ್ಡ ಕಂಪೆನಿಗಳು ಟಿಕೆಟ್ ಬೆಲೆ ನಿರ್ಧರಿಸುತ್ತವೆ. ಆದರೆ ಪ್ರಮುಖ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತವೆ ಎಂದು ಆರೋಪಿಸಿದರು. “ಅವರು ಬೆಲೆಗಳನ್ನು ನಿಗದಿಪಡಿಸಬಹುದು. ಅವರು ಪ್ರಯಾಣಿಕರಿಗೆ ಹಿಂಸೆ ನೀಡಬಹುದು. ಆದರೆ ವಿಮಾನ ಅಪಘಾತಗಳಿಗೆ ಅವರು ಜವಾಬ್ದಾರರಲ್ಲ” ಎಂದು ಹೇಳಿದರು.

ಸರ್ಕಾರವು ಏಕಸ್ವಾಮ್ಯವನ್ನು ವಿರೋಧಿಸುತ್ತದೆ ಎಂದು ಹೇಳಿಕೊಳ್ಳುತ್ತದೆ. ಆದರೆ ಅಂತಹವುಗಳನ್ನು ಅಸ್ತಿತ್ವದಲ್ಲಿರಲು ಏಕೆ ಅವಕಾಶ ನೀಡಲಾಗಿದೆ ಎಂದು ಗೋಸ್ವಾಮಿ ಪ್ರಶ್ನಿಸಿದರು. ಇತ್ತೀಚಿನ ವಿಮಾನ ದುರಂತದ ಬಗ್ಗೆ ಸರಕಾರ ಏರ್ ಇಂಡಿಯಾವನ್ನು ಹೊಣೆಗಾರರನ್ನಾಗಿ ಮಾಡಿದೆಯೇ? ಆಗೆ ಮಾಡಿರುವುದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಏರ್ ಇಂಡಿಯಾ ವಾಯುಯಾನಕ್ಕೆ ಯೋಗ್ಯವಲ್ಲದ ವಿಮಾನಗಳನ್ನು ನಿರ್ವಹಿಸುತ್ತಿದೆ. ಆದರೆ ಯಾವುದೇ ಗಂಭೀರ ಕ್ರಮವನ್ನು ಕೈಗೊಂಡಿಲ್ಲ ಎಂದು ಹೇಳಿದರು. ವಿಮಾನ ದುರಂತದ ನಂತರ ನಾಗರಿಕ ವಿಮಾನಯಾನದ ಉಸ್ತುವಾರಿ ಹೊಂದಿರುವ ಯಾವುದೇ ಸಚಿವರನ್ನು ಅಮಾನತುಗೊಳಿಸಲಾಗಿದೆಯಾ? ಆ ರೀತಿ ಏನೂ ನಡೆದಿಲ್ಲ ಎಂದು ಹೇಳಿದರು.

ಅವರು ಜವಾಬ್ದಾರರಲ್ಲ. ಮತ್ತು ಕೇಂದ್ರ ಸರಕಾರ ಅದರ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುವುದಿಲ್ಲ? ಏಕೆಂದರೆ ಅವರು ಮೈತ್ರಿ ಪಕ್ಷ ಟಿಡಿಪಿಯಿಂದ ಬಂದವರು ಎಂದು ಹೇಳಿದರು.

ಸಿಂಧೂರ್ ಘಟನೆಯ ನಂತರ ಏರ್ ಇಂಡಿಯಾ ಸರಕಾರದ ಬೆಂಬಲವನ್ನು ಪಡೆಯುತ್ತಲೇ ಇದೆ, ಅದರಲ್ಲಿ ನಷ್ಟಗಳಿಗೆ ಪರಿಹಾರವೂ ಸೇರಿದೆ ಎಂದು ಹೇಳಿದರು. ವಿಮಾನಯಾನ ಸಂಸ್ಥೆಯನ್ನು ಬೆಂಬಲಿಸಲು ಸಾರ್ವಜನಿಕ ಹಣವನ್ನು ಏಕೆ ಬಳಸಬೇಕು ಎಂದು ಅರ್ನಬ್ ಗೋಸ್ವಾಮಿ ಪ್ರಶ್ನಿಸಿದರು.

ವಿಮಾನಗಳ ವಿಳಂಬ, ಹಠಾತ್ ರದ್ದತಿ ಮತ್ತು ಪರಿಹಾರದ ಕೊರತೆಯಿಂದಾಗಿ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಗೋಸ್ವಾಮಿ ಹೇಳಿದರು. ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಜಾರಿಗೊಳಿಸುತ್ತಿಲ್ಲ ಎಂದು ಹೇಳುವ ಮೂಲಕ ಅವರು ಡಿಜಿಸಿಎಯನ್ನು ಟೀಕಿಸಿದರು. ಈ ವಿಚಾರದಲ್ಲಿ ಪ್ರಧಾನ ಮಂತ್ರಿ ಕಚೇರಿ ಮಧ್ಯಪ್ರವೇಶಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಈ ವಿಷಯಗಳ ಕುರಿತು ರಿಪಬ್ಲಿಕ್ ಹಲವು ಬಾರಿ ಬಹಿರಂಗಪಡಿಸಿದೆ. ಏರ್ ಇಂಡಿಯಾ ಇತರ ಚಾನೆಲ್‌ಗಳಿಗೆ ಮಾತ್ರ ಸಂದರ್ಶನಗಳು ಮತ್ತು ಜಾಹೀರಾತುಗಳನ್ನು ನೀಡಲು ಆಯ್ಕೆ ಮಾಡುತ್ತದೆ ಎಂದು ಹೇಳಿದರು.

ನಾವು ಹೀಗೆ ಹೇಳುವುದರಿಂದ ಸರ್ಕಾರ ಸಂತೋಷಪಡುವುದಿಲ್ಲ ಎಂದು ನನಗೆ ಖಚಿತವಾಗಿದೆ, ಆದರೆ ಈ ದೇಶದ ಜನರ ಪರವಾಗಿ ಯಾರಾದರೂ ಮಾತನಾಡಬೇಕು ಎಂದು ಗೋಸ್ವಾಮಿ ಹೇಳಿದರು.

"ಗೋದಿ ಮೀಡಿಯಾ ಮುಖ್ಯಸ್ಥ" ಎಂದು ತಮ್ಮ ವಿಮರ್ಶಕರಿಂದ ಕರೆಯಲ್ಪಡುವ ಗೋಸ್ವಾಮಿ, ನಾಗರಿಕ ವಿಮಾನಯಾನದ ಕುರಿತು ಮೋದಿ ಸರಕಾರದ ಮೇಲೆ ಮಾಡಿದ ನೇರ ದಾಳಿಯು ಚರ್ಚೆಗೆ ಗ್ರಾಸವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News