ಷೇರುಪೇಟೆಯಿಂದ ನಾಲ್ಕು ದಿನಗಳಲ್ಲಿ ರೂ 13,121 ಕೋಟಿ ಹಿಂತೆಗೆದುಕೊಂಡ ವಿದೇಶಿ ಹೂಡಿಕೆದಾರರು!
Photo Credit : PTI
2025ರಲ್ಲಿ ಜಾಗತಿಕವಾಗಿ ಅತ್ಯಂತ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರೆನ್ಸಿಗಳಲ್ಲಿ ಒಂದಾದ ಭಾರತೀಯ ರೂಪಾಯಿಯ ದುರ್ಬಲ ಕಾರ್ಯಕ್ಷಮತೆಯು ವಿದೇಶಿ ಹೂಡಿಕೆದಾರರಲ್ಲಿ ಮತ್ತಷ್ಟು ನಿರುತ್ಸಾಹ ಮೂಡಿಸಿದೆ. ಇದು ಚಿನ್ನದ ಬೆಲೆಯಲ್ಲೂ ಏರಿಳಿತಕ್ಕೆ ಕಾರಣವಾಗುತ್ತಿದೆ
ಹೊಸದಿಲ್ಲಿ: ವಿದೇಶಿ ಹೂಡಿಕೆದಾರರು ಡಿಸೆಂಬರ್ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ಭಾರತೀಯ ಷೇರುಪೇಟೆಗಳಿಂದ ರೂ. 13,121 ಕೋಟಿ (1.46 ಶತಕೋಟಿ ಡಾಲರ್) ಹಿಂತೆಗೆದುಕೊಂಡಿರುವುದಾಗಿ ಎನ್‌ಎಸ್‌ಡಿಎಲ್ ದತ್ತಾಂಶ ತಿಳಿಸಿದೆ. 2025ರಲ್ಲಿ ಜಾಗತಿಕವಾಗಿ ಅತ್ಯಂತ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರೆನ್ಸಿಗಳಲ್ಲಿ ಒಂದಾದ ಭಾರತೀಯ ರೂಪಾಯಿಯ ದುರ್ಬಲ ಕಾರ್ಯಕ್ಷಮತೆಯು ವಿದೇಶಿ ಹೂಡಿಕೆದಾರರಲ್ಲಿ ಮತ್ತಷ್ಟು ನಿರುತ್ಸಾಹ ಮೂಡಿಸಿದೆ.
ಗುರುವಾರದ ದತ್ತಾಂಶದ ಪ್ರಕಾರ 2025ರ ಒಟ್ಟು ಹೊರಹರಿವು ರೂ 1.56 ಲಕ್ಷ ಕೋಟಿ (17.8 ಶತಕೋಟಿ ಡಾಲರ್) ತಲುಪಿದೆ. ನವೆಂಬರ್‌ನಲ್ಲಿ ರೂ 3,765 ಕೋಟಿ ನಿವ್ವಳ ಹೊರಹರಿವಿನ ನಂತರ ಈ ತೀವ್ರ ಪ್ರಮಾಣದ ಹಿಂತೆಗೆತ ವರದಿಯಾಗಿದ್ದು, ಮಾರುಕಟ್ಟೆಗಳ ಮೇಲಿನ ಒತ್ತಡ ಮುಂದುವರೆದಿದೆ.
ಅಕ್ಟೋಬರ್‌ನಲ್ಲಿ ಅಲ್ಪಾವಧಿಯ ವಿರಾಮದ ನಂತರ ಈ ಹೊರಹರಿವು ಕಂಡುಬಂದಿದೆ. ಅಕ್ಟೋಬರ್ ಗಿಂತ ಮೊದಲು ಸತತ ಮೂರು ತಿಂಗಳು ಹೊರಹರಿವು ವರದಿಯಾಗಿತ್ತು. ಸೆಪ್ಟೆಂಬರ್‌ನಲ್ಲಿ ರೂ 23,885 ಕೋಟಿ, ಆಗಸ್ಟ್‌ನಲ್ಲಿ ರೂ 34,990 ಕೋಟಿ, ಮತ್ತು ಜುಲೈನಲ್ಲಿ ರೂ 17,700 ಕೋಟಿ ಹೊರಹರಿವಿನ ನಂತರ ಅಕ್ಟೋಬರ್ ನಲ್ಲಿ ಎಫ್‌ಪಿಐಗಳು ರೂ 14,610 ಕೋಟಿ ಹೂಡಿಕೆ ಮಾಡಿದ್ದವು.
ಮಾರುಕಟ್ಟೆಯ ಈ ಹೊರಹರಿವು ಮತ್ತು ಒಳಹರಿವು ಚಿನ್ನದ ಬೆಲೆಯ ಮೇಲೂ ಆಗುತ್ತಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತ ಕಂಡುಬರುತ್ತಿದೆ. ಮಂಗಳವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ ಬುಧವಾರ ದಿಢೀರ್ ಏರಿಕೆಯಾಗಿತ್ತು. ಗುರುವಾರ ಸ್ವಲ್ಪ ಇಳಿಕೆ ದಾಖಲಿಸಿತ್ತು. ಇದೀಗ ಶುಕ್ರವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.