×
Ad

48 ಗಂಟೆಗಳಿಂದ ಸುರಂಗದೊಳಗೆ ಸಿಲುಕಿಕೊಂಡಿರುವ 8 ಮಂದಿ ಕಾರ್ಮಿಕರು; ರಕ್ಷಣಾ ಕಾರ್ಯಕ್ಕೆ ಸಿಲ್ಕ್ಯಾರಾ ತಂಡದ ಸೇರ್ಪಡೆ

Update: 2025-02-24 11:34 IST

Photo: PTI

ಹೈದರಾಬಾದ್: ತೆಲಂಗಾಣದ ನಾಗರ್ಕರ್ನೂಲ್‌ನ ಶ್ರೀಶೈಲಂ ಅಣೆಕಟ್ಟಿನ ಕುಸಿದಿರುವ ಸುರಂಗದೊಳಗೆ ಕಳೆದ 48 ಗಂಟೆಗಳಿಂದ ಸಿಲುಕಿಕೊಂಡಿರುವ ಎಂಟು ಕಾರ್ಮಿಕರನ್ನು ಹೊರತರಲು ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಕಾರ್ಯಚರಣೆ ಮಾಡುತ್ತಿವೆ. ಇದೀಗ ರಕ್ಷಣಾ ಕಾರ್ಯಕ್ಕೆ ಸಿಲ್ಕ್ಯಾರಾ ತಂಡದ ಸೇರ್ಪಡೆಯಾಗಿದೆ.

ಸುರಂಗದೊಳಗೆ ಬಿದ್ದಿರುವ ಮಣ್ಣಿನ ರಾಶಿ ಮತ್ತು ನೀರು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕಾರ್ಮಿಕರು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎಂದು ರಾಜ್ಯದ ಸಚಿವರು ಹೇಳಿದ್ದಾರೆ.

ನಾಗರ್ಕರ್ನೂಲ್‌ನ ಶ್ರೀಶೈಲಂ ಅಣೆಕಟ್ಟಿನ ಹಿಂದೆ ಇರುವ 44 ಕಿಮೀ ಉದ್ದದ ಸುರಂಗವು, ಶನಿವಾರ ಬೆಳಿಗ್ಗೆ ಕೆಲವು ಕಾರ್ಮಿಕರು ಒಳಗೆ ಸೋರಿಕೆಯನ್ನು ಸರಿಪಡಿಸುತ್ತಿದ್ದಾಗ ಕುಸಿದು ಬಿದ್ದಿತು. ಹೆಚ್ಚಿನ ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಎಂಟು ಮಂದಿ ಒಳಗೆ ಸಿಕ್ಕಿಹಾಕಿಕೊಂಡು ಶನಿವಾರದಿಂದ ಸಂಪರ್ಕ ಕಳೆದುಕೊಂಡಿದ್ದಾರೆ.

ಅವರಲ್ಲಿ ನಾಲ್ವರು ಕಾರ್ಮಿಕರು ಮತ್ತು ನಾಲ್ವರು ನಿರ್ಮಾಣ ಕಂಪೆನಿಯ ಉದ್ಯೋಗಿಗಳು ಎಂದು ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿರುವ ರಾಜ್ಯ ಸಚಿವ ಕೃಷ್ಣ ರಾವ್ ಹೇಳಿದ್ದಾರೆ.

ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯದ ವಿಪತ್ತು ನಿರ್ವಹಣಾ ಘಟಕಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ನೌಕಾಪಡೆಯ ಕಮಾಂಡೋಗಳು ಅವರಿಗೆ ಸಹಾಯ ಮಾಡಲು ಆಗಮಿಸಿದ್ದಾರೆ. ಉತ್ತರಾಖಂಡದಲ್ಲಿ 2023 ರ ಸಿಲ್ಕ್ಯಾರಾ ಸುರಂಗದ ಯಶಸ್ವಿ ಕಾರ್ಯಾಚರಣೆಯ ಹಿಂದಿನ ತಂಡದ ಆರು ಸದಸ್ಯರೂ ರಕ್ಷಣಾ ಕಾರ್ಯಗಳಲ್ಲಿ ಸೇರಿಕೊಂಡಿದ್ದಾರೆ.

ಸುರಂಗದ ಬಾಯಿಯ ಕನಿಷ್ಠ 13 ಕಿ.ಮೀ ದೂರದಲ್ಲಿ ಕುಸಿತ ಸಂಭವಿಸಿದ್ದು, ರಕ್ಷಣಾ ತಂಡವು 100 ಮೀಟರ್ ತಲುಪಿದೆ. ಆದರೆ ರಕ್ಷಣಾ ಕಾರ್ಯಾಚರಣೆಗೆ ನೀರು ಮತ್ತು ಮಣ್ಣು ಅಡ್ಡಿಯಾಗುತ್ತಿದೆ ಎಂದು ಸಚಿವರು ಹೇಳಿದರು.

"ಸುರಂಗದೊಳಗೆ ಕೆಸರು ತುಂಬಾ ಎತ್ತರಕ್ಕೆ ಸಂಗ್ರಹವಾಗಿದ್ದು, ನಡೆಯಲು ಅಸಾಧ್ಯವಾಗಿದೆ. ರಕ್ಷಣಾ ತಂಡವು ರಬ್ಬರ್ ಟ್ಯೂಬ್‌ಗಳು ಮತ್ತು ಮರದ ಹಲಗೆಗಳನ್ನು ಬಳಸುತ್ತಿದೆ. ಕಾರ್ಮಿಕರು ಬದುಕುಳಿಯುವ ಸಾಧ್ಯತೆಗಳು ಕ್ಷೀಣಿಸಿದೆ. ಆದರೆ ನಾವು ಆಶಾವಾದಿಗಳಾಗಿದ್ದೇವೆ. ಪ್ರಯತ್ನವನ್ನು ಮುಂದುವರಿಸಿದ್ದೇವೆ" ಎಂದು ಬಚಿವ ರಾವ್ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪರಿಸ್ಥಿತಿಯನ್ನು ಅವಲೋಕನ ಮಾಡಲಾಗುತ್ತಿದೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ನಿನ್ನೆ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಕರೆ ಮಾಡಿ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಸಹಾಯದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News