ಅಸ್ಸಾಂ | 81 ‘ದೇಶ ವಿರೋಧಿ’ಗಳ ಬಂಧನ: ಸಿಎಂ ಹಿಮಂತ ಬಿಸ್ವಾ ಶರ್ಮಾ
Photo Credit: ANI
ಗುವಾಹಟಿ: ದೇಶ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಅಸ್ಸಾಂನಿಂದ ಮತ್ತಿಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಎಪ್ರಿಲ್ ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಈ ರೀತಿ ಬಂಧನಕ್ಕೆ ಒಳಗಾದವರ ಸಂಖ್ಯೆ 81ಕ್ಕೆ ತಲುಪಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರವಿವಾರ ತಿಳಿಸಿದ್ದಾರೆ.
‘ಎಕ್ಸ್’ನ ಪೋಸ್ಟ್‌ನಲ್ಲಿ ಶರ್ಮಾ ಅವರು, ಸೋನಿತ್‌ಪುರ ಹಾಗೂ ಕಾಮರೂಪ್ ಜಿಲ್ಲೆಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
‘‘ಪಾಕಿಸ್ತಾನದ ಬಗ್ಗೆ ಸಹಾನುಭೂತಿ ಹೊಂದಿರುವುದಕ್ಕಾಗಿ ಈಗ 81 ಮಂದಿ ದೇಶ ವಿರೋಧಿಗಳು ಕಂಬಿಯ ಹಿಂದಿದ್ದಾರೆ. ನಮ್ಮ ಸರಕಾರ ಸಾಮಾಜಿಕ ಮಾಧ್ಯಮದ ದೇಶ ವಿರೋಧಿ ಪೋಸ್ಟ್‌ಗಳನ್ನು ನಿರಂತರ ಪರಿಶೀಲಿಸುತ್ತಿದೆ ಹಾಗೂ ಕ್ರಮ ತೆಗೆದುಕೊಳ್ಳುತ್ತಿದೆ’’ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಪರ ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇ 2ರಂದು ಶರ್ಮಾ ಎಚ್ಚರಿಸಿದ್ದರು.