×
Ad

ಪಶ್ಚಿಮ ಬಂಗಾಳ ಆಸ್ಪತ್ರೆಯಲ್ಲಿ 9 ನವಜಾತ ಶಿಶು, 1 ಮಗು ಸಾವು ; ತನಿಖೆಗೆ ಆದೇಶಿಸಿದ ರಾಜ್ಯ ಸರಕಾರ

Update: 2023-12-08 21:01 IST

ಸಾಂದರ್ಭಿಕ ಚಿತ್ರ

ಕೋಲ್ಕತಾ: ಪಶ್ಚಿಮಬಂಗಾಳದ ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 9 ನವಜಾತ ಶಿಶುಗಳು ಹಾಗೂ ಒಂದು 2 ವರ್ಷದ ಮಗು ಮೃತಪಟ್ಟಿವೆ.

ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯ ಸರಕಾರ ಶಿಶು ಹಾಗೂ ಮಗುವಿನ ಸಾವಿನ ಹಿಂದಿನ ಕಾರಣದ ಕುರಿತು ತನಿಖೆ ನಡೆಸಲು ತನಿಖಾ ಸಮಿತಿ ರೂಪಿಸಿದೆ.

ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೂರು ಶಿಶುಗಳು ಜನಿಸಿವೆ ಹಾಗೂ ಇತರ ಶಿಶುಗಳನ್ನು ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಉಪ ವಿಭಾಗದಿಂದ ಶಿಫಾರಸು ಮಾಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ನರ ಸಂಬಂಧಿ ಸಮಸ್ಯೆಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಆಸ್ಪತ್ರೆಗಳಲ್ಲಿ ದಾಖಲಾದ ಇತರ ಮಕ್ಕಳ ಸುರಕ್ಷತೆ ಬಗ್ಗೆ ಹೆತ್ತವರು ಚಿಂತಿತರಾಗಿದ್ದಾರೆ.

ಜಂಗಿಪುರ ಉಪ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಕಳೆದ 6 ವಾರಗಳಿಂದ ನವೀಕರಣ ಕೆಲಸ ನಡೆಯುತ್ತಿದೆ ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಕಾರಣದಿಂದ ಜಂಗಿಪುರ ಉಪ ವಿಭಾಗದ ಎಲ್ಲಾ ಶಿಶುಗಳನ್ನು ಬಹರಾಂಪುರಕ್ಕೆ ಕಳುಹಿಸಲಾಗಿದೆ ಎಂದು ಅದು ತಿಳಿಸಿದೆ. ಆರೋಗ್ಯ ಹದಗೆಡುತ್ತಿದ್ದರೂ ನವಜಾತ ಶಿಶುಗಳನ್ನು ದೋಮ್ಕಲ್, ಲಾಲ್ಬಾಗ್ ಉಪ-ವಿಭಾಗೀಯ ಆಸ್ಪತ್ರೆಯಿಂದ ಬಹರಾಂಪುರಕ್ಕೆ ಕಳುಹಿಸಲಾಗಿದೆ ಎಂದು ಕೂಡ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ಶಿಶು ಹಾಗೂ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿದ ವರದಿಯನ್ನು ಪಶ್ಚಿಮಬಂಗಾಳದ ಆರೋಗ್ಯ ಇಲಾಖೆಗೆ ಕಳುಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ 30 ದಿನಗಳಲ್ಲಿ ಒಟ್ಟು 380 ನವಜಾತ ಶಿಶುಗಳನ್ನು ಈ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮುರ್ಶಿದಾಬಾದ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘‘ಮೃತಪಟ್ಟ 10 ಶಿಶುಗಳಲ್ಲಿ 7 ಶಿಶುಗಳು ಚಿಂತಾಜನಕ ಸ್ಥಿತಿಯಲ್ಲಿ ಕುಗ್ರಾಮಗಳಿಂದ ಬಂದಿವೆ. ಈ ಶಿಶುಗಳಿಗೆ ಚಿಕಿತ್ಸೆ ನೀಡುವ ಸುವರ್ಣಾವಧಿ ಕಳೆದು ಹೋಗಿತ್ತು. ಉಳಿದ ಮೂರು ಶಿಶುಗಳು ಆಸ್ಪತ್ರೆಯಲ್ಲಿ ಜನಿಸಿವೆ. ಇವುಗಳಲ್ಲಿ ಒಂದು ಜನನದ ಸಂದರ್ಭ ಮೃತಪಟ್ಟಿದೆ ಹಾಗೂ ಎರಡು ಶಿಶುಗಳ ತೂಕ ತುಂಬಾ ಕಡಿಮೆ ಇದ್ದುದರಿಂದ ಅನಂತ ಮೃತಪಟ್ಟಿದೆ’’ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

ಹೆಚ್ಚಿನ ಶಿಶುಗಳ ತಾಯಂದಿರು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಆದುದರಿಂದ ಶಿಶುಗಳ ತೂಕ ಜನನದ ಸಂದರ್ಭ ಅತಿ ಕಡಿಮೆ ಇದೆ. ಈ ಕಾರಣದಿಂದ ಈ ಮಕ್ಕಳು ಬದುಕುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News