×
Ad

ಒಡಿಶಾ | ಸ್ನೇಹಿತನಿಂದ ಬ್ಲ್ಯಾಕ್ ಮೇಲ್; ಕಾಲೇಜು ವಿದ್ಯಾರ್ಥಿನಿಯಿಂದ ಸಜೀವ ದಹನ

ಒಂದೇ ತಿಂಗಳಲ್ಲಿ ಮೂರನೆಯ ಪ್ರಕರಣ

Update: 2025-08-06 19:32 IST

 ಸಾಂದರ್ಭಿಕ ಚಿತ್ರ



ಕೇಂದ್ರಪಾರ (ಒಡಿಶಾ): ತನ್ನ ಸ್ನೇಹಿತ ಬ್ಲ್ಯಾಕ್ ಮೇಲ್ ಮಾಡಿದನೆಂದು ಸುಮಾರು 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಸ್ವಗೃಹದಲ್ಲಿ ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿರುವ ಮನಕಲಕುವ ಘಟನೆ ಬುಧವಾರ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 12ರಿಂದ ಇಲ್ಲಿಯವರೆಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಮಹಿಳೆಯೊಬ್ಬರು ಸುಟ್ಟು ಗಾಯಗಳಿಂದ ಮೃತಪಟ್ಟಿರುವ ಮೂರನೆಯ ಘಟನೆ ಇದಾಗಿದೆ. ಬುಧವಾರ ಬೆಳಗ್ಗೆ ಪಟ್ಟಮುಂಡೈ (ಗ್ರಾಮೀಣ) ಪೊಲೀಸ್ ಠಾಣೆ ವ್ಯಾಪ್ತಿಯ ಕಥಿಯಾಪಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯ ತಂದೆ, ಆಕೆ ಮನೆಯಲ್ಲಿ ಒಬ್ಬಳೇ ಇರುವಾಗ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

“ಆಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಹಾಗೂ ಆತನಿಂದ ಬ್ಲ್ಯಾಕ್ ಮೇಲ್ ಗೆ ಒಳಗಾಗಿದ್ದಳು” ಎಂದು ಅವರು ಆರೋಪಿಸಿದ್ದಾರೆ. “ಒಂದು ವೇಳೆ ಆತನೇನಾದರೂ ಕಿರುಕುಳ ನೀಡುತ್ತಿದ್ದರೆ, ಆತನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡುವಂತೆ ಪೊಲೀಸರು ನನ್ನ ಪುತ್ರಿಗೆ ಸೂಚಿಸಿದ್ದರು” ಎಂದೂ ಅವರು ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೇಂದ್ರಪಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕಟಾರಿಯಾ, “ನಾನು ಮೃತದೇಹವನ್ನು ನೋಡಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಜುಲೈ 12ರಿಂದ ಇಲ್ಲಿಯವರೆಗೆ ಇದು ಇಂತಹ ಮೂರನೆಯ ಘಟನೆಯಾಗಿದೆ.

ಇದಕ್ಕೂ ಮುನ್ನ, ಜುಲೈ 12ರಂದು ಬಾಲಾಸೋರ್ ನ ಎಫ್ಎಂ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಆವರಣದಲ್ಲಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಳು. ಇದಾದ ಎರಡು ದಿನಗಳ ನಂತರ, ಏಮ್ಸ್-ಭುವನೇಶ್ವರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.

ಮತ್ತೊಂದು ಪ್ರಕರಣದಲ್ಲಿ, ಆಗಸ್ಟ್ 2ರಂದು ಪುರಿ ಜಿಲ್ಲೆಯ ಬಲಂಗ ಪ್ರದೇಶದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳೂ ಸಹ ಸುಟ್ಟು ಗಾಯಗಳಿಂದ ಮೃತಪಟ್ಟಿದ್ದಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News