ಮಹಾರಾಷ್ಟ್ರ | ಪೊಲೀಸ್ ಕಾನ್ಸ್‌ಟೇಬಲ್ ಗೆ ಕಪಾಳ ಮೋಕ್ಷ ಮಾಡಿದ್ದ ಆರೋಪಿಗೆ ಒಂಭತ್ತು ವರ್ಷಗಳ ನಂತರ ಒಂದು ದಿನದ ಜೈಲು ಶಿಕ್ಷೆ!
ಥಾಣೆ: ರಸ್ತೆ ಜಗಳವೊಂದರಲ್ಲಿ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ಗೆ ಕಪಾಳ ಮೋಕ್ಷ ಮಾಡಿದ್ದ ಆರೋಪಕ್ಕೀಡಾಗಿದ್ದ 52 ವರ್ಷದ ವ್ಯಕ್ತಿಯೊಬ್ಬರನ್ನು ಒಂಭತ್ತು ವರ್ಷಗಳ ನಂತರ ದೋಷಿ ಎಂದು ಘೋಷಿಸಿರುವ ಇಲ್ಲಿನ ಸೆಷನ್ಸ್ ನ್ಯಾಯಾಲಯ, ಅವರ ಅಸ್ಥಿರ ಆರೋಗ್ಯ ಹಾಗೂ ಕೌಟುಂಬಿಕ ಹೊಣೆಗಾರಿಕೆಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ದಿನದ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಆರೋಪಿಗೆ 10,000 ರೂ. ದಂಡವನ್ನೂ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾ. ಜಿ.ಡಿ.ಪವಾರ್, ಆರೋಪಿಯು ವಿಚಾರಣೆಯ ವೇಳೆ ತೋರಿದ ವರ್ತನೆ, ಆತನ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಹೊಣೆಗಾರಿಕೆಗಳು ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಗೆ ಆಗಿರುವ ಗಾಯದ ಸ್ವರೂಪವನ್ನು ಪರಿಗಣಿಸಿ, ತನ್ನ ಬಗ್ಗೆ ಸೌಮ್ಯ ನಿಲುವು ತಳೆಯಲು ಆರೋಪಿಯು ಅರ್ಹನಾಗಿದ್ದಾನೆ ಎಂದು ಅಭಿಪ್ರಾಯಪಟ್ಟರು.
ಜುಲೈ 31ರಂದು ಹೊರಡಿಸಲಾಗಿರುವ ಈ ಆದೇಶವು ಬುಧವಾರದಂದು ಸಾರ್ವಜನಿಕವಾಗಿ ಲಭ್ಯವಾಗಿದೆ.
ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿತಗೊಂಡಿರುವ ರಮೇಶ್ ಶಿತ್ಕರ್, ನವೆಂಬರ್ 18, 2016ರಂದು ಥಾಣೆಯ ಕ್ಯಾಡ್ಬರಿ ಸಿಗ್ನಲ್ ಬಳಿ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ದಿಲೀಪ್ ಪವಾರ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ಸಾರ್ವಜನಿಕ ಸೇವಕರೊಬ್ಬರ ಮೇಲೆ ಸ್ವಯಂಪ್ರೇರಿತವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 ಹಾಗೂ 332ರ ಅಡಿ ಪ್ರಕರಣ ದಾಖಲಾಗಿತ್ತು. ಆದರೆ, ಶಾಂತಿಭಂಗ ಮಾಡುವ ಉದ್ದೇಶದೊಂದಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ ಎಂಬ ದೋಷಾರೋಪಗಳನ್ನು ರುಜುವಾತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಯಿತು.
ರಮೇಶ್ ಶಿತ್ಕರ್ ವೇಗವಾಗಿ ಚಲಾಯಿಸುತ್ತಿದ್ದ ಕಾರನ್ನು ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ದಿಲೀಪ್ ಪವಾರ್ ಮಾರ್ಗಮಧ್ಯಗದಲ್ಲಿ ತಡೆಯಲು ಯತ್ನಿಸಿದಾಗ ಈ ಘಟನೆ ನಡೆದಿತ್ತು. ಕಾರನ್ನು ನಿಲ್ಲಿಸಿದ್ದ ರಮೇಶ್ ಶಿತ್ಕರ್, ರಸ್ತೆ ಮಧ್ಯೆಯೇ ದಿಲೀಪ್ ಪವಾರ್ ರನ್ನು ನಿಂದಿಸಿ, ಅವರಿಗೆ ಒಂದೇ ಸಮನೆ ಕಪಾಳ ಮೋಕ್ಷ ಮಾಡಿದ್ದರು ಎಂದು ಆರೋಪಿಸಲಾಗಿತ್ತು.